Share this news

ಉಡುಪಿ: ಉಡುಪಿ ತಾಲೂಕಿನ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ನೇಜಾರಿನಲ್ಲಿ ಭಾನುವಾರ ಬೆಳಗ್ಗೆ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ತನಿಖೆ ಚುರುಕಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಡುಪಿ ಜಿಲ್ಲಾ ಪೊಲೀಸರ 5 ವಿಶೇಷ ತಂಡಗಳು ನಾನಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ಕೃತ್ಯ ನಡೆಸಿದ ಬಳಿಕ ಆರೋಪಿ ಮನೆಯಿಂದ ಪರಾರಿಯಾಗಿ ಸಂತೆ ಕಟ್ಟೆ ಜಂಕ್ಷನ್‌ನಿಂದ ಬಲಾಯಿ ಪಾದೆ ಅಲ್ಲಿಂದ ಉದ್ಯಾವರ ತನಕ ತೆರಳಿರುವ ದೃಶ್ಯಾವಳಿಗಳನ್ನು ಪೊಲೀಸರು ಕಲೆ ಹಾಕಿದ್ದು, ಉಡುಪಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿನ ಸಿಸಿ
ದೃಶ್ಯಾವಳಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

 

ಕನ್ನಡದಲ್ಲಿ ಮಾತನಾಡುತ್ತಿದ್ದ ಆರೋಪಿ, ಸುಮಾರು 15 ರಿಂದ 20 ನಿಮಿಷಗಳ ಒಳಗೆ ನಾಲ್ವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಶಂಕಿಸಲಾಗಿದೆ. ಉಡುಪಿಯ ಸಂತೆಕಟ್ಟೆಯಿಂದ ರಿಕ್ಷಾದಲ್ಲಿ ಘಟನಾ ಸ್ಥಳಕ್ಕೆ ಬಂದಿದ್ದ ಆರೋಪಿ, ಮತ್ತೆ 20 ನಿಮಿಷಗಳ ಒಳಗೆ ಸಂತೆ ಕಟ್ಟೆಯ ಅದೇ ರಿಕ್ಷಾ ನಿಲ್ದಾಣಕ್ಕೆ ಆಗಮಿಸಿದ್ದ. ಆಟೋ ಚಾಲಕನಿಗೆ ಕರಾವಳಿ ಜಂಕ್ಷನ್‌ಗೆ ಬಿಡುವಂತೆ ಹೇಳಿದ್ದ ಎನ್ನಲಾಗಿದೆ.

 

 

ಆಟೋ ರಿಕ್ಷಾ ಚಾಲಕ ಶ್ಯಾಮ್ ನೇಜಾರು ಅವರು‌ ನಿಂತಿದ್ದ ಆಟೋ ನಿಲ್ದಾಣಕ್ಕೆ ಬಂದಿದ್ದ ಆರೋಪಿ, ತೃಪ್ತಿ ಲೇಔಟ್‌ ಗೊತ್ತೇ ಎಂದು ವಿಚಾರಿಸಿದ್ದ. ಆಗ ಉಳಿದ ಆಟೋ ಚಾಲಕರಲ್ಲಿ ವಿಚಾರಿಸಿ ಹಂಪನ ಕಟ್ಟೆ ಬಳಿ ಎಂದು ಮಾಹಿತಿ ಪಡೆದ ಆಟೋ ಚಾಲಕ, ಆರೋಪಿಯನ್ನು ಕರೆದುಕೊಂಡು ಬಂದಿದ್ದ. ರಿಕ್ಷಾದಲ್ಲಿ ಕುಳಿತಿದ್ದ ಆರೋಪಿ, ತೃಪ್ತಿ ಲೇಔಟ್ ಬಳಿ ಆಟೋ ಬಂದ ಕೂಡಲೇ ಇದೇ ಜಾಗವೆಂದು ಹೇಳಿ ರಿಕ್ಷಾ ತಿರುಗಿಸುವಂತೆ ಸೂಚಿಸಿದ್ದ‌ ಎನ್ನಲಾಗಿದೆ. ಮನೆಯ ಗೇಟ್‌ ಮುಂಭಾಗ ಆಟೋ ನಿಲ್ಲಿಸಿದ ಚಾಲಕ, ಅಲ್ಲಿಂದ ವಾಪಸ್ ಬಂದಿದ್ದ. ಆರೋಪಿ ಮನೆ ಒಳಗೆ ಪ್ರವೇಶಿಸಿದ್ದ. ಈ ವೇಳೆ ನನಗೆ ಆರೋಪಿ ಬಗ್ಗೆ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ಆಟೋ ಚಾಲಕ ಹೇಳಿದ್ದಾನೆ. ಇನ್ನು ಮನೆಯ ಬಾಗಿಲ ಬಳಿ ಬಾಲಕನೋರ್ವ ನಿಂತುಕೊಂಡಿದ್ದ. ಆರೋಪಿಯು ಬೆನ್ನಿಗೆ ಹಾಕುವ ಬ್ಯಾಗ್ ಒಂದು ಹಾಕಿಕೊಂಡಿದ್ದ ಎಂದೂ ಆಟೋ ಚಾಲಕ ಮಾಹಿತಿ ನೀಡಿದ್ದಾನೆ.ಬೆಳಗ್ಗೆ 8.30ರ ಸುಮಾರಿಗೆ ಆರೋಪಿಯನ್ನು ಸಂತೆ ಕಟ್ಟೆಯಿಂದ ಕೃತ್ಯ ನಡೆದ ಮನೆ ಬಳಿ ಆಟೋ ಚಾಲಕ ಬಿಟ್ಟಿದ್ದರು. ಇದಾದ ಕೇವಲ 20 ನಿಮಿಷದೊಳಗೆ ಮತ್ತೆ ಅದೇ ರಿಕ್ಷಾ‌ ನಿಲ್ದಾಣಕ್ಕೆ ಆರೋಪಿ ಬಂದಿದ್ದ. ಬೈಕ್‌ನಲ್ಲಿ ಬಂದಿಳಿದ ಆರೋಪಿ ಗಾಬರಿಯಲ್ಲಿದ್ದ. ತನ್ನನ್ನು ಕರಾವಳಿ ಬೈಪಾಸ್‌ಗೆ ಬಿಡುವಂತೆ ಇನ್ನೊಂದು ರಿಕ್ಷಾ ಚಾಲಕರಲ್ಲಿ‌ ಕೇಳಿಕೊಂಡಿದ್ದ. ಆಗ ಆಟೋ ಚಾಲಕ ಶ್ಯಾಮ್ ಅವರು, ಈಗ ತಾನೇ ನಾನು ನಿಮ್ಮನ್ನು ಮನೆಯ ಬಳಿ ಬಿಟ್ಟಿದೆ. ಅಲ್ಲಿಯೇ ನಿಲ್ಲುವಂತೆ ನೀವು ಹೇಳಿದ್ದರೆ, ನಾನು ಅಲ್ಲಿಯೇ ನಿಲ್ಲುತ್ತಿದ್ದೆ ಎಂದು ಹೇಳಿದರು. ಆಗ ಆರೋಪಿಯು ಬೇಡ, ಈಗ ನನಗೆ ತುರ್ತು ಇದೆ, ಬೇಗ ಕರಾವಳಿ ಬೈಪಾಸ್‌ಗೆ ಬಿಡಿ ಎಂದಿಷ್ಟೇ ಆಟೋ ಚಾಲಕರಿಗೆ ಕೇಳಿಕೊಂಡ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಹಣಕಾಸು ವಿಚಾರವಾಗಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಕೃತ್ಯ ಎಸಗಿದ ದುಷ್ಕರ್ಮಿ ಸುಪಾರಿ ಕಿಲ್ಲರ್ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು, ನಾನಾ ಆಯಾಮದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನಾಲ್ವರ ಮೃತ ದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

Leave a Reply

Your email address will not be published. Required fields are marked *