ಕಾರ್ಕಳ: ಕಾರ್ಕಳ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಡಾರಿ ಬಳಿ 407 ಟೆಂಪೋ ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ನಾಲ್ವರಿಗೆ ಗಾಯಗಳಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ. 407 ಟೆಂಪೋ ಬಜಗೋಳಿ ಕಡೆಯಿಂದ ಮಾಳ ಕಡೆಗೆ ತೆಂಗಿನಕಾಯಿ ತುಂಬಿಸಿಕೊಂಡು ಹೋಗುತ್ತಿದ್ದಾಗ ಕಡಾರಿ ಎಂಬಲ್ಲಿ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸುನಿಲ್(35) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ರಭಸಕ್ಕೆ ಟೆಂಪೋ ಕಲ್ಲು ಬಂಡೆಗೆ ಅಪ್ಪಳಿಸಿದ ಪರಿಣಾಮ ಮುಂಭಾಗದ ಆಕ್ಸಿಲ್ ತುಂಡಾಗಿ ಈ ಭೀಕರ ಅಪಘಾತ ಸಂಭವಿಸಿದೆ.ಅತೀವೇಗವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದ್ದು ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಟೆಂಪೋ ಪಲ್ಟಿಯಾಗಿದೆ
ಈ ಅಪಘಾತದಲ್ಲಿ ಮಾಳ ಗ್ರಾಮದ ಶಶಾಂಕ್(21) ಸಂಜೀವ,ಸಚಿನ್ ಹಾಗೂ ಚಾಲಕ ಹರೀಶ್ ಗಾಯಗೊಂಡಿದ್ದು, ಈ ಪೈಕಿ ಸಂಜೀವ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.