Share this news

ಬೆಂಗಳೂರು: ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳಿಂದ ಜನೋದ್ಧಾರ ಗ್ಯಾರಂಟಿ ಎಂದು ಹಸಿಸುಳ್ಳು ಹೇಳಿದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ಮುಗಿಬಿದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 5 ಗ್ಯಾರಂಟಿಗಳಿಂದ ಜನೋದ್ಧಾರ ಗ್ಯಾರಂಟಿ ಎಂದು ಹಸಿಸುಳ್ಳು ಹೇಳಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಗೆಟ್ಟ ವರನಂತೆ ವರ್ತಿಸುತ್ತಿದೆ. ಬೆಲೆ ಏರಿಕೆ ಹೊಡೆತಕ್ಕೆ ಜನ ತತ್ತರಿಸುತ್ತಿರುವುದು ಅದರ ಕಣ್ಣಿಗೆ ಕಾಣುತ್ತಿಲ್ಲ ನನಗೂ ಫ್ರೀ, ನಿನಗೂ ಫ್ರೀ ಎಂದು ಗ್ಯಾರಂಟಿ ಜಾಗಟೆ ಹೊಡೆದ ಈ ಸರಕಾರಕ್ಕೆ ಮಾರುಕಟ್ಟೆಯಲ್ಲಿ ಗಗನಮುಖಿಯಾದ ಆಹಾರ ಪದಾರ್ಥಗಳ ಬೆಲೆ ಮೇಲೆ ನಿಯಂತ್ರಣವೇ ಇಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ಜನರ ಕಣ್ಣೀರಿನಲ್ಲಿ ಗೆಣಸು ಬೇಯಿಸಿಕೊಳ್ಳುತ್ತಿವೆ. ಅವರಿಗೆ ಬೆಲೆ ಇಳಿಕೆ ಬಗ್ಗೆ ಚಿಂತನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಈ ಸರಕಾರ ಬಂದು ತಿಂಗಳ ಮೇಲಾಯಿತು. ಅಧಿಕಾರ ಸಿಕ್ಕ ಕೂಡಲೇ ವರ್ಗಾವಣೆ ದಂಧೆಯ ದಾಸ್ಯಕ್ಕೆ ಬಿದ್ದ ಸರಕಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಹೋಗುತ್ತಿರುವ ಬೆಲೆಗಳ ಬಗ್ಗೆ, ಆಹಾರ ಪದಾರ್ಥಗಳ ದುಬಾರಿ ಬಗ್ಗೆ ಗಮನ ಹೋಗಲೇ ಇಲ್ಲ. ಹಣದ ಹಪಾಹಪಿ ಭಾಗ್ಯಗಳನ್ನು ಬಲಿ ತೆಗೆದುಕೊಳ್ಳುವ ದುಸ್ಥಿತಿಗೆ ದೂಡಿದೆ.ಬೆಲೆ ಏರಿಕೆ ಪಟ್ಟಿ ಓದಿದರೆ ಎದೆ ನಡುಗುತ್ತದೆ. ಅಕ್ಕಿ ಬೆಲೆ ಕೆಜಿಗೆ ಸರಾಸರಿ ರೂ.20 ಏರಿದ್ದರೆ, ಕೆಜಿ ಟೊಮ್ಯಾಟೋ ಬೆಲೆ 100 ರೂ. ಮುಟ್ಟಿದೆ. ಈ ಏರಿಕೆ ಲಾಭ ಅತ್ತ ರೈತನಿಗೂ ಇಲ್ಲ, ಇತ್ತ ಗ್ರಾಹಕನಿಗೂ ಇಲ್ಲ. ಜನ ಬೆಲೆ ಬೆಂಕಿಯಲ್ಲಿ ಬೇಯುತ್ತಿದ್ದರೆ ಈ ಸರಕಾರ ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ, ಹೊಸ ಹುಂಡಿಗಳಿಗೆ ಜಾಗ ಹುಡುಕುತ್ತಿದೆ.

ರಾಜ್ಯ ಕಾಂಗ್ರೆಸ್ ತಾನು ಕೊಟ್ಟ ಭರವಸೆಗಳ ಬಗ್ಗೆ ಉತ್ತರ ಹೇಳಲಿ. ಬೆಲೆಗಳ ಇಳಿಕೆಯ ಬಗ್ಗೆ ಹೇಳಿದ್ದೆಲ್ಲ ಎಲ್ಲಿ ಹೋಯಿತು? ಮತ ಪಡೆದ ಮೇಲೆ ಎಲ್ಲಾ ಮರೆತು ಹೋಯಿತಾ? 135 ಸೀಟು ಸಿಕ್ಕಿದ ಮೇಲೆ ಪ್ರಣಾಳಿಕೆ ಪುಸ್ತಕಕ್ಕೆ ಮೂವತ್ತೇ ದಿನದಲ್ಲಿ ಗೆದ್ದಲು ಹಿಡಿಯಿತಾ? ನುಡಿದಂತೆ ನಡೆದಿದ್ದೇವೆ ಎಂದಿರಿ, ನುಡಿದಂತೆ ಎಲ್ಲಿ ನಡೆದಿದ್ದೀರಿ? ನುಡಿದಂತೆ ನಡೆದಿದ್ದೇವೆ ಎಂದರೆ ಲಂಗೂ ಲಗಾಮು ಇಲ್ಲದೆ ಬೆಲೆಗಳನ್ನು ಆಕಾಶಕ್ಕೆ ಜಿಗಿಸುವುದಾ? ಮಾರುಕಟ್ಟೆಯ ದಲ್ಲಾಳಿಗಳಿಗೆ ಶಕ್ತಿ ತುಂಬುವುದಾ? ಶಕ್ತಿ ಯೋಜನೆ ಮೂಲಕ ಮಹಿಳೆಯರ ಗಮನ ಬೇರೆಡೆಗೆ ಸೆಳೆದು, ಅವರ ಅಡುಗೆ ಮನೆ ಬಜೆಟ್‌ಗೆ ಕೊಳ್ಳಿ ಇಡುವುದಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹೊಸ ಗ್ಯಾರಂಟಿಗಳು

1.ಅಕ್ಕಿಭಾಗ್ಯ ಹಗಲು ಕನಸು, ಬೆಲೆ ಏರಿಕೆ ಕನಸು ನನಸು!
2.ಗೃಹಜ್ಯೋತಿ ಈಗ ಸುಡುಜ್ಯೋತಿ!!
3.ಶಕ್ತಿ ಯೋಜನೆಯಿಂದ ಸಾರಿಗೆ ವ್ಯವಸ್ಥೆಯಲ್ಲಿ ಅರಾಜಕತೆ!!!
4.ಗೃಹಲಕ್ಷ್ಮಿಗೆ ಗ್ರಹಣ!!!!
5.ನಿದಿರೆಗೆ ಜಾರಿದೆ ಯುವನಿಧಿ!!!! ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ಸರ್ಕಾರದ ಯೋಜನೆಗಳ ಬಗೆ ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *