Share this news

ಬೆಂಗಳೂರು: ರಾಜ್ಯ ಪಠ್ಯಕ್ರಮವಿರುವ ಶಾಲೆಗಳ 5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಮುಂದಿನ ವಿಚಾರಣೆಯನ್ನು ಮಾರ್ಚ್‌ 27 ಕ್ಕೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

ಹೈಕೋರ್ಟ್ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲಾ ಒಕ್ಕೂಟಗಳು   ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ಸಿಜೆಐ ಚಂದ್ರಚೂಡ್ ಪೀಠದ ಮುಂದೆ ಒಕ್ಕೂಟದ ವಕೀಲರಿಂದ ಪ್ರಸ್ತಾಪ ಇಡಲಾಗಿತ್ತು .  ಈ ವೇಳೆ ಮಾರ್ಚ್ 27 ರಂದು ವಿಚಾರಣೆ  ಮಾಡುವುದಾಗಿ ಪೀಠ ತಿಳಿಸಿದೆ.  ಖಾಸಗಿ ಶಾಲೆಗಳ ಕುಸುಮಾ, ರುಪ್ಸಾ ಸೇರಿ 3 ಸಂಘಟನೆಗಳಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಶೇಷವೆಂದರೆ ಇದೇ ದಿನ ಅಂದರೆ ಮಾರ್ಚ್ 27 ರಂದೇ ಪರೀಕ್ಷೆ ನಿಗಧಿಯಾಗಿದೆ.  ಇದರ ಬೆನ್ನಲ್ಲೇ ನಾಳೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಅರ್ಜಿ ಹಾಕಿ, ಸುಪ್ರೀಂ ಕೋರ್ಟ್ ವಿಚಾರವನ್ನು ಹೈಕೋರ್ಟ್ ಗೆ ಮನವರಿಕೆ ಮಾಡಿಕೊಡಲು ವಕೀಲರು ಸಿದ್ದತೆ ನಡೆಸಿದ್ದಾರೆ.

ರಾಜ್ಯ ಪಠ್ಯಕ್ರಮವಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್‌ ಪರೀಕ್ಷೆ ನಡೆಸಲು ಹೈಕೋರ್ಟ್‌ ವಿಭಾಗೀಯ ಪೀಠ ಹಸಿರು ನಿಶಾನೆ ತೋರಿತ್ತು. ಮಾ.27ರಿಂದ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದಕ್ಕೂ ಮುನ್ನ ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್‌) ಪರೀಕ್ಷೆ ನಡೆಸಲು ತೀರ್ಮಾನಿಸಿ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು. 

ಈ ತೀರ್ಪು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್‌ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ ಮಧ್ಯಂತರ  ಆದೇಶ  ಹೊರಡಿಸಿ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.  ಅದರಂತೆ ಸರ್ಕಾರವು ಮಾ.27ರಿಂದ ಪರೀಕ್ಷೆ ನಡೆಸಲು ತಿಳಿಸಿತ್ತು. ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯೇತರವಾದ ಯಾವುದೇ ಪ್ರಶ್ನೆಗಳು ಇರದಂತೆ ಸರ್ಕಾರ ನೋಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಯನ್ನೂ ಅನುತ್ತೀರ್ಣಗೊಳಿಸುವಂತಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸೂಚಿಸಿತ್ತು. 

ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಬೋರ್ಡ್‌ ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರ 2022ರ ಡಿ.12, 13 ಮತ್ತು 2023ರ ಜ.4ರಂದು ಸುತ್ತೋಲೆ ಹೊರಡಿಸಿತ್ತು. ಅದನ್ನು ರದ್ದುಪಡಿಸಲು ಕೋರಿ ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಮತ್ತಿತರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *