ನವದೆಹಲಿ: ನರೇಂದ್ರ ಮೋದಿ ಸೇರಿದಂತೆ ಸಂಸದರು ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹಿಳಾ ನೌಕರರಿಗೆ ವಿಶೇಷ ಕೊಡುಗೆ ನೀಡಿದೆ. ಇನ್ಮುಂದೆ ಬಾಡಿಗೆ ತಾಯ್ತನದ ಸಂದರ್ಭದಲ್ಲೂ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ 50 ವರ್ಷದ ನಿಯಮ ಬದಲಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.
ವಿಶೇಷ ಅಂದರೆ ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗುವಿನ ತಾಯಿಗೆ 6 ತಿಂಗಳ ಹೆರಿಗೆ ರಜೆ ಘೋಷಿಸಿದರೆ, ಅದೇ ಮಗುವಿನ ತಂದೆಗೆ 15 ದಿನಗಳ ಪಿತೃತ್ವ ರಜೆಯನ್ನೂ ಮಗುವಿನ ಆರೈಕೆಗಾಗಿ ನೀಡಲಾಗಿದೆ. ಇದುವರೆಗೂ ಬಾಡಿಗೆ ತಾಯ್ತನದ ಸಂದರ್ಭದಲ್ಲಿ ರಜೆ ನೀಡುವ ನಿಯಮ ಇರಲಿಲ್ಲ. ಇದೀಗ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ ಮಹತ್ವದ ನಿಯಮ ರೂಪಿಸಿದೆ. ಕೇಂದ್ರ ನಾಗರಿಕ ಸೇವೆಗಳ(ರಜೆ) ನಿಯಮಗಳು, 1972 ರಲ್ಲಿ ಮಾಡಲಾದ ಬದಲಾವಣೆಗಳ ಪ್ರಕಾರ, “ಕಮಿಷನಿಂಗ್ ತಾಯಿ” (ಸರೊಗಸಿ ಮೂಲಕ ಜನಿಸಿದ ಮಗುವಿನ ಉದ್ದೇಶಿತ ತಾಯಿ) “ಕಮಿಷನಿಂಗ್ ಫಾದರ್” ಗೆ 15 ದಿನಗಳ ಪಿತೃತ್ವ ರಜೆ ಜೊತೆಗೆ ಮಕ್ಕಳ ಆರೈಕೆ ರಜೆಯನ್ನು ಸಹ ಇದು ಅನುಮತಿಸಿದೆ.
ಬಾಡಿಗೆ ತಾಯ್ತನ ಎಂದರೆ ಮಕ್ಕಳಾಗದ ದಂಪತಿಗಾಗಿ ಬೇರೊಬ್ಬ ಮಹಿಳೆ ಗರ್ಭ ಧರಿಸಿ, ಮಕ್ಕಳಾಗದವರಿಗೆ ಮಗುವನ್ನು ಹೆತ್ತುಕೊಡುವ ಪ್ರಕ್ರಿಯೆಯನ್ನೇ ಬಾಡಿಗೆ ತಾಯ್ತನ ಎಂದು ಕರೆಯುತ್ತಾರೆ.ಇತ್ತೀಚೆಗೆ ಬಾಡಿಗೆ ತಾಯ್ತನದಲ್ಲಿ ಕೆಲ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ವಿವಾಹಿತ ದಂಪತಿಯ ಪೈಕಿ ಯಾರಿಗಾದರೂ ಒಬ್ಬರಿಗೆ ಆರೋಗ್ಯ ಸಮಸ್ಯೆ ಇದ್ದರೆ ಅಂಥವರು ದಾನಿಗಳಿಂದ ಅಂಡಾಣು ಅಥವಾ ವೀರ್ಯಾಣುವನ್ನು ಪಡೆದು ಬಾಡಿಗೆ ತಾಯ್ತನದ(ಸರೋಗಸಿ) ಮೂಲಕ ಸಂತಾನ ಹೊಂದಲು ಕೇಂದ್ರ ಸರ್ಕಾರ ನಿಯಮಗಳಿಗೆ ತಿದ್ದುಪಡಿ ಮಾಡಿದೆ.ಪತಿ ಅಥವಾ ಪತ್ನಿ ಯಾರದರೊಬ್ಬರು ಆರೋಗ್ಯ ಸಮಸ್ಯೆ ಹೊಂದಿದ್ದು ಮಗು ಪಡೆಯಲು ಸಾಧ್ಯವಾಗದಿದ್ದಾಗ, ಅಂತವರು ದಾನಿಗಳಿಂದ ನೆರವು ಪಡೆಯಬಹುದು ಎಂದು ತಿದ್ದುಪಡಿ ತರಲಾಗಿದೆ. 2022ರ ಬಾಡಿಗೆ ತಾಯ್ತನದ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಹೊಸ ನಿಮಯ ರೂಪಿಸಿದೆ.
