Share this news

ವಿಶೇಷ ವರದಿ: Krishna M Naik

ಕಾರ್ಕಳ:ಕಳೆದ ಎರಡು ದಶಕಗಳಿಂದ ಕೇರಳ ಹಾಗೂ ಕರ್ನಾಟಕ ಸರ್ಕಾರಗಳು ಹಾಗೂ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದ್ದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಮ್ ಗೌಡ ಸಹಿತ 6 ಮಂದಿ ನಕ್ಸಲರು ಶರಣಾಗತಿಗೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ನಕ್ಸಲರ ಶರಣಾಗತಿ ಸುದ್ದಿಯು ರಕ್ತಕ್ರಾಂತಿಯಿಂದ ನಲುಗಿದ್ದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇದೀಗ ಮತ್ತೆ ಶಾಂತಿ ಸ್ಥಾಪನೆಯಾಗುವ ಹೊಸ ಭರವಸೆ ಮೂಡಿಸಿದೆ.

ಪೊಲೀಸ್ ಮೂಲಗಳ ಪ್ರಕಾರ ಸಧ್ಯ ಕೇರಳದಲ್ಲಿ ಸಕ್ರಿಯವಾಗಿರುವ ವಿಕ್ರಮ್ ಗೌಡ ನೇತೃತ್ವದ ತಂಡವು ಶರಣಾಗತಿಯಾಗುವ ಇಂಗಿತ ವ್ಯಕ್ತಪಡಿಸಿದೆ. ವಿಕ್ರಮ್ ಗೌಡ ತಂಡ ಇತರೇ ಸದಸ್ಯರಾದ ವನಜಾಕ್ಷಿ, ಮುಂಡಗಾರು ಲತಾ, ಜಾನ್,ಸುಂದರಿ, ಕೋಟೆಹೊಂಡ ರವೀಂದ್ರ ಎಂಬವರ ಶರಣಾಗತಿಗೆ ಮಾತುಕತೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ತಂಡದ ಇನ್ನೋರ್ವ ಸದಸ್ಯ ಅಂಗಡಿ ಸುರೇಶ್ ಈಗಾಗಲೇ ಬಂಧಿತನಾಗಿದ್ದು ಜೈಲಿನಲ್ಲಿದ್ದಾನೆ.
ಕರ್ನಾಟಕದಲ್ಲಿ ಪ್ರಸ್ತುತ 6-8 ನಕ್ಸಲರು ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ ಎನ್ನಲಾಗಿದ್ದು,ಈ ಪೈಕಿ ಕೆಲವರು ಮಾತ್ರ ಕರ್ನಾಟಕದವರಾಗಿದ್ದು, ಉಳಿದವರು ಕೇರಳ, ಜಾರ್ಖಂಡ್ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳಿಂದ ಬಂದವರು ಎನ್ನಲಾಗುತ್ತಿದೆ. ಪ್ರಮುಖವಾಗಿ ಉತ್ತರಭಾರತದ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ನಕ್ಸಲರ ವಿರುದ್ಧ ಸ್ಥಳೀಯ ಸರ್ಕಾರಗಳು ಭಾರೀ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಕ್ಸಲ್ ವಾದಕ್ಕೆ ಹಿನ್ನಡೆಯಾಗಿದೆ,ಇದರಿಂದ ಕರ್ನಾಟಕಕ್ಕೆ ನಕ್ಸಲರ ವಲಸೆಯೂ ಕಡಿಮೆಯಾದ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಕ್ಸಲ್ ವಾದ ನೆಲೆ ಕಳೆದುಕೊಳ್ಳಲು ಕಾರಣವಾಗಿದೆ, ಮಾತ್ರವಲ್ಲದೇ ನಕ್ಸಲ್ ಗುಂಪುಗಳಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸ್ಥಳೀಯ ನಾಗರಿಕರ ಬೆಂಬಲವಿಲ್ಲದ ಕಾರಣದಿಂದ ನಕ್ಸಲೀಯರ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.ಈ ಎಲ್ಲಾ ಬೆಳವಣಿಗೆಗಳಿಂದ ವಿಕ್ರಮ್ ಗೌಡ ತಂಡವು ಶರಣಾಗತಿಗೆ ಮುಂದಾಗಿದೆ ಎನ್ನಲಾಗಿದೆ.

ಕರಾವಳಿ ಕರ್ನಾಟಕದಲ್ಲಿ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ಪ್ರಯತ್ನಗಳು ಈ ಹಿಂದಿನಿಂದಲೂ ನಡೆಯುತ್ತಿದೆ. ಕರ್ನಾಟಕ ಸರ್ಕಾರವು ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಕೇಂದ್ರಿತ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಮೂಲಕ ಶಸ್ತ್ರಾಸ್ತ್ರ ತೊರೆದು ಬರುವ ನಕ್ಸಲೀಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಾಕಷ್ಟು ಪ್ರಯತ್ನ‌ ನಡೆಯುತ್ತಿದೆ.
ರಕ್ತಕ್ರಾಂತಿ ಬಿಟ್ಟು ಶಸ್ತ್ರಾಸ್ತ್ರಗಳ ಜತೆ ಶರಣಾಗತಿಯಾಗುವವರಿಗೆ ಸರ್ಕಾರದಿಂದ ಗರಿಷ್ಟ 7.50 ಲಕ್ಷ ರೂ, ವರೆಗೆ ನಗದು ಪರಿಹಾರದ ಪ್ಯಾಕೇಜ್ ಜತೆಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನಕ್ಸಲ್‌ ನಿಗ್ರಹ ದಳದ ಎಸ್ಪಿ
ಜಿತೇಂದ್ರ ಕುಮಾರ್‌ ದಯಾಮ ಹೇಳಿದ್ದಾರೆ.

ವಿಕ್ರಮ್ ಗೌಡ ನೇತೃತ್ವದ ತಂಡವು ಶರಣಾಗಿ ಮುಖ್ಯವಾಹಿನಿಗೆ ಬಂದರೆ ಸ್ವಾಗತ, ಆದರೆ ಅವರ ಮೇಲಿನ ಪ್ರಕರಣಗಳನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಅವುಗಳನ್ನು ವಿಶೇಷವಾಗಿ ಪರಿಗಣಿಸಿ ಆದ್ಯತೆ ನೆಲೆಯಲ್ಲಿ ಶೀಘ್ರ ಇತ್ಯರ್ಥಪಡಿಸಲು ಪ್ರಯತ್ನಿಸಿ ಅವರಿಗೆ ನಗದು ಸಹಿತ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ಬದ್ಧ ಹೋರಾಟಕ್ಕೆ ಶರಣಾಗತಿಯದವರಿಗೂ ಸಮಾನ ಅವಕಾಶವಿದೆ ಎಂದು ರಾಜ್ಯ ನಕ್ಸಲರ ಶರಣಾಗತಿ ಪುನರ್ವಸತಿ ಸಮಿತಿಯ ಸದಸ್ಯ ಕೆ.ಪಿ. ಶ್ರೀಪಾಲ ಹೇಳಿದ್ದಾರೆ ‌

ವಿಕ್ರಮ್ ಗೌಡ ನೇತೃತ್ವದ ತಂಡ ಶರಣಾಗತಿಯಾದಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿದ್ದ ರಕ್ತಕ್ರಾಂತಿಗೆ ಮುಕ್ತಿ ಸಿಗಲಿದೆ‌

                       in 

Leave a Reply

Your email address will not be published. Required fields are marked *