ಬೆಂಗಳೂರು: ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ 700 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಬರದಿಂದ ಕಂಗೆಟ್ಟ ರೈತರ ಹಾಹಾಕಾರ ಒಂದೆಡೆಯಾದರೆ, ಹಾಲಿನ ಸಬ್ಸಿಡಿಯನ್ನೂ ಕೊಡದೇ ಮೋಸ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ. ಹಾಲು ಉತ್ಪಾದಕರ ಸಬ್ಸಿಡಿ ಹಣ 700 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಸರ್ಕಾರದ ಆತ್ಮಸಾಕ್ಷಿ ಸತ್ತು ಹೋಗಿದೆಯಾ? ಎಂದು ಕಿಡಿಕಾರಿದ್ದಾರೆ.
ಕಳೆದ 7 ತಿಂಗಳಿಂದ ಸತಾಯಿಸುತ್ತಿದ್ದು, ಶೇ 32ರಷ್ಟು ಕೃಷಿ ಅನುದಾನಕ್ಕೆ ಕತ್ತರಿ ಹಾಕಿದ್ದಾಯಿತು. ಈಗ ಹೈನುಗಾರರ ಸಬ್ಸಿಡಿಗೂ ಪಂಗನಾಮ. ಒಂದು ಲೀಟರ್ ಹಾಲಿನ ಸಬ್ಸಿಡಿಯನ್ನು 7 ರೂ. ಹೆಚ್ಚಿಸುತ್ತೇವೆ ಎಂದು ಚುನಾವಣೆ ವೇಳೆ ಕಾಂಗ್ರೆಸ್ ಸುಳ್ಳು ಹೇಳಿದ್ದೇ ಹೇಳಿದ್ದು. ಹೆಚ್ಚಿಸುವ ಮಾತಿರಲಿ, ಇದ್ದ ಸಬ್ಸಿಡಿಯನ್ನೂ (ಲೀಟರ್ ಹಾಲಿಗೆ 5 ರೂ.) ಕೊಡದೇ 7 ತಿಂಗಳಿಂದ ಸತಾಯಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ”.
“ಗೋವಿನ ಆಹಾರವಾದ ಹಿಂಡಿ, ಬೂಸಾ ಬೆಲೆ ಗಗನಕ್ಕೇರಿದೆ. ಮೇವೂ ಸಿಗುತ್ತಿಲ್ಲ. ಇಂಥ ಕಡು ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಕೂಡಲೇ ರಾಜ್ಯ ಸರ್ಕಾರ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ