Share this news

ಕೊಡಗು:ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಸಾಗುವಳಿ ಮಾಡುವ ರೈತರಿಗೆ ಸರ್ಕಾರ ಶುಭಸುದ್ದಿ ನೀಡಿದೆ.
ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದು ಸಕ್ರಮಕ್ಕಾಗಿ ರೈತರು ಬಗರ್ ಹುಕುಂಗೆ ಅರ್ಜಿ ಸಲ್ಲಿಸಿದ್ದರೆ ಅವುಗಳನ್ನು 8 ತಿಂಗಳೊಳಗೆ ವಿಲೇವಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇ ಗೌಡ ಹೇಳಿದ್ದಾರೆ.
ಅವರು ಸೋಮವಾರ ಕೊಡಗಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಜಿಲ್ಲೆಯಲ್ಲಿ ಸಾವಿರಾರು ಬಗರ್ ಹುಕುಂ ಅರ್ಜಿಗಳು ಸಲ್ಲಿಕೆಯಾಗಿದ್ದು ಮುಂದಿನ 8 ತಿಂಗಳಲ್ಲಿ ಈ ಎಲ್ಲಾ ಅರ್ಜಿಗಳನ್ನೂ ವಿಲೇಗೊಳಿಸಿ ಅರ್ಹರಿಗೆ ಭೂಮಿ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಫಾರ್ಮ್ 57ರ ಅಡಿಯಲ್ಲಿ ಸಲ್ಲಿಸಲಾಗಿರುವ ಬಗರ್ ಹುಕುಂ ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಅಧಿಕಾರಿಗಳು ಬಗರ್ ಹುಕುಂ ಆ್ಯಪ್ ಸಹಾಯದಿಂದ ಅರ್ಹರಿಗೆ ಶೀಘ್ರವಾಗಿ ಸಾಗುವಳಿ ಚೀಟಿ ಮಂಜೂರು ಮಾಡಬೇಕು. ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಮಣಿಯದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ರೈತರ ಆರ್‌ಟಿಸಿ ಜೊತೆಗೆ ಆಧಾರ್ ಲಿಂಕ್ ಜೋಡಣೆ ನಮ್ಮ ಮುಂದಿನ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಗಮನ ಸೆಳೆದ ಅವರು, “ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಕನಿಷ್ಠ ಶೇ.77 ರಷ್ಟಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಈ ಸಂಖ್ಯೆ ಕೇವಲ ಶೇ.44 ರಷ್ಟು ಮಾತ್ರ. ಪರಿಣಾಮ ಕೇಂದ್ರದ ಮಾನದಂಡದ ಪ್ರಕಾರ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಲಭ್ಯವಾಗುತ್ತಿದೆ. ಹೀಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿ ನಮೂದಿಸುವಾಗ ಅವರ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಮಾಡಬೇಕು. ಆ ಮೂಲಕ ಪರಿಹಾರ‌ ಹಣದ ದುರ್ಬಳಕೆಯನ್ನು ತಡೆಯುವ ಜೊತೆಗೆ ರಾಜ್ಯದ ರೈತರ ನಿಖರ ಅಂಕಿಅಂಶ ಪಡೆಯಬಹುದು ಎಂದು ಅವರು ವಿವರಿಸಿದರು.

 

 

 
 

 

 
 

Leave a Reply

Your email address will not be published. Required fields are marked *