Share this news

ಮಂಗಳೂರು: ಮಂಗಳೂರಿನಲ್ಲಿ ನ.19ರಂದು ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಉಡುಪಿ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಸೇರಿ ರಾಜ್ಯದ 6 ಕಡೆ ದಾಳಿ ನಡೆಸಿರುವ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ತಂಡ, ಕುಖ್ಯಾತ ಉಗ್ರಗಾಮಿ ಸಂಘಟನೆ ಐಸಿಸ್ ಜತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಂದ ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

 

 

ಶಿವಮೊಗ್ಗದ ಮಂಜುನಾಥ ಬಡಾವಣೆಯ ನಿವಾಸವೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಸುಮಾರು 2 ಗಂಟೆ ಕಾಲ ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬನ ವಿಚಾರಣೆ ನಡೆಸಿ ತೆರಳಿದೆ. ದಕ್ಷಿಣ ಕನ್ನಡದ ಕೊಣಾಜೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ರಿಹಾನ್ ಶೇಖ್ ಹಾಗೂ ಹೊನ್ನಾಳಿಯ ಇಂಜಿನಿಯರಿಂಗ್ ವಿದ್ಯಾರ್ಥಿ ಬಂಧಿತರು.

ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ ಆರೋಪದಡಿ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಹಾಗೂ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್ ಜತೆ ಬಂಧಿತ ವಿದ್ಯಾರ್ಥಿಗಳು ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೇ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಐಸಿಎಸ್ ಜೊತೆಗೂ ಇವರು ಸಂಪರ್ಕ ಹೊಂದಿರುವ ಸಾಧ್ಯತೆಯಿದ್ದು, ಭಯೋತ್ಪಾದನೆಗೆ ಸಂಬಂಧಿಸಿದ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆಯಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಬೆಳಗ್ಗೆ ಮಂಗಳೂರು ಹೊರವಲಯದ ಕೊಣಾಜೆ ನಡುಪದವು ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿದ ಏಳು ಮಂದಿ ಅಧಿಕಾರಿಗಳ ತಂಡ, ಉಡುಪಿ ಮೂಲದ ರಿಹಾನ್ ಶೇಖ್ ಎಂಬಾತನನ್ನು ಬಂಧಿಸಿದೆ. ಈತನನ್ನು ಉಡುಪಿಯ ಪೆರಂಪಳ್ಳಿ ನಿವಾಸಕ್ಕೆ ಕರೆ ತಂದು, ವಿಚಾರಣೆ ಬಳಿಕ ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಈತ ಈ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದಾನೆ. ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸುತ್ತಿದ್ದ ಆರೋಪದಡಿ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಜೊತೆ ಈತ ನಿರಂತರ ಸಂಪರ್ಕ ಹೊಂದಿದ್ದು, ವಿವಿಧ ಚಟುವಟಿಕೆಗಳಲ್ಲಿ ಜತೆಯಾಗಿ ಭಾಗಿಯಾಗಿದ್ದ. ಅಲ್ಲದೆ, ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್ ಜೊತೆಯೂ ಈತ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಮುನೀರ್ ಹಾಗೂ ಶಾರೀಕ್ ಇಬ್ಬರೂ ಐಸಿಸ್ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿರುವುದು ಈಗಾಗಲೇ ತನಿಖೆ ವೇಳೆ ತಿಳಿದು ಬಂದಿದೆ.

ಈ ಮಧ್ಯೆ, ಬುಧವಾರ ತಡರಾತ್ರಿ ಹೊನ್ನಾಳಿ ಪಟ್ಟಣ ಪೊಲೀಸ್ ಠಾಣೆ ಎದುರಿನ ಜನವಸತಿ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿದ ಎನ್‌ಐಎ ತಂಡ, ಸುಮಾರು 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದೆ. ಆತನ ಮನೆಯನ್ನೆಲ್ಲಾ ಪರಿಶೀಲಿಸಿದ್ದು, ಆತನಿಗೆ ಸೇರಿದ ಲ್ಯಾಪ್‌ಟಾಪ್, ಮೊಬೈಲ್ ಇತರ ವಸ್ತುಗಳನ್ನು ಕೊಂಡೊಯ್ದಿದೆ. ಇದೇ ವೇಳೆ, ಶಿವಮೊಗ್ಗದ ಮಂಜುನಾಥ್ ಬಡಾವಣೆಯ ನಿವಾಸವೊಂದರ ಮೇಲೂ ದಾಳಿ ನಡೆಸಿದ್ದು, ಸುಮಾರು 2 ಗಂಟೆ ಕಾಲ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ವಿಚಾರಣೆ ನಡೆಸಿ, ಆತನ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ, ಮರಳಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *