ಬೆಂಗಳೂರು: ಕಳೆದ 20 ದಿನಗಳಿಂದ ಗಣಿ ಹಾಗೂ ಕ್ರಶರ್ ಮಾಲಕರು ಸರಕಾರ ಎರಡು ಕಡೆ ರಾಜಧನ ವಸೂಲಾತಿ ಮಾಡುತ್ತಿದೆ ಆದ್ದರಿಂದ ಇದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಶುಕ್ರವಾರ ರಾತ್ರಿಯಿಂದ ವಾಪಾಸ್ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಗಣಿ ಮತ್ತು ಕ್ರಶರ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.
ಸರಕಾರದ ನೀತಿಯಿಂದ ಗಣಿಗಾರಿಕೆ ನಡೆಸುವುದು ಕಷ್ಟಕರವಾಗಿದೆ, ಗಣಿಗಾರಿಕೆ ವಿಚಾರದಲ್ಲಿ ಸರಕಾರ ಎರಡು ಕಡೆ ರಾಜಧನ ಸಂಗ್ರಹಣೆ ಮಾಡುತ್ತಿರುವುದರಿಂದ ನಷ್ಟದಲ್ಲಿ ಗಣಿಗಾರಿಕೆ ಮಾಡುವವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಒಂದು ಬಾರಿ ಮಾತ್ರ ರಾಜಧನ ವಸೂಲಿ ಮಾಡಬೇಕು ಎಂದು ಗಣಿ ಮಾಲಕರು ಬಿಗಿಪಟ್ಟು ಹಿಡಿದಿದ್ದರು.ಆದರೆ ಸರಕಾರ ಈ ವಿಚಾರದಲ್ಲಿ ಪೂರಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಗಣಿ ಹಾಗೂ ಕ್ರಶರ್ ಮಾಲೀಕರು ರಾಜ್ಯಾದ್ಯಂತ ಏಕಕಾಲದಲ್ಲಿ ಚಟುವಟಿಕೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಇದೇ ವಿಚಾರವಾಗಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಬಿಸಿಮಟ್ಟಿಸಿದ್ದರು.
ಸರಕಾರ ಕೊನೆಗೂ ಗಣಿ ಮಾಲಕರ ಪ್ರತಿಭಟನೆಗೆ ಮಣಿದು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಶುಕ್ರವಾರ ರಾತ್ರಿಯಿಂದಲೇ ಎಲ್ಲಾ ಗಣಿ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದು ಗಣಿ ಹಾಗೂ ಕ್ರಶರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.