Share this news

ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ, ನೇರ ಸಾಲ, ಉದ್ಯಮಶೀಲತೆ ಅಭಿವೃದ್ಧಿ, ಮೈಕ್ರೋ ಕ್ರೆಡಿಟ್, ಸಮೃದ್ಧಿ ಹಾಗೂ ಐರಾವತ ಯೋಜನೆಗಳಲ್ಲಿ ನಡೆದಿರುವ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಅನುದಾನ ದುರ್ಬಳಕೆ ಮೇರೆಗೆ ಕೆಎಎಸ್ ಅಧಿಕಾರಿ ಕೆ.ಎಂ. ಸುರೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.

ನಿಗಮದ ಎಂಡಿಯಾಗಿದ್ದ ಸುರೇಶ್ ಕುಮಾರ್, ತಮ್ಮ ಅಧಿಕಾರದ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಗುತ್ತಿಗೆದಾರರಿಗೆ ಜಿಎಸ್‌ಟಿ ಮೊತ್ತವನ್ನು ಅಕ್ರಮವಾಗಿ ಪಾವತಿಸಿ ನಿಗಮಕ್ಕೆ 3.50 ಕೋಟಿ ರೂ.ನಷ್ಟವನ್ನುಂಟು ಮಾಡಿರುವುದು, ನೇರಸಾಲ ಯೋಜನೆಯಲ್ಲಿ ನಿಗಮದ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಅನುಮೋದನೆ ಇಲ್ಲದೆ ನೇರವಾಗಿ 5000 ಫಲಾನುಭವಿಗಳನ್ನು ಆಯ್ಕೆ ಮಾಡಿ 25 ಕೋಟಿ ರೂ.ದುರುಪಯೋಗ ಮಾಡಿರುವುದು, 2018-19ನೇ ಸಾಲಿನ ಐರಾವತ ಯೋಜನೆಯಲ್ಲಿ ಸರ್ಕಾರದ ಆದೇಶದಂತೆ ಮೆರಿಟ್ ಅಂಕ ಆಧರಿಸಿ ಆಯ್ಕೆಯಾಗಿದ್ದ 92 ಹೆಸರುಗಳನ್ನು ರದ್ದುಪಡಿಸಿ ಅರ್ಜಿ ಸಲ್ಲಿಸದಿರುವ ಅಷ್ಟೇ ಸಂಖ್ಯೆಯ ಫಲಾನುಭವಿಗಳನ್ನು ನೇರವಾಗಿ ಆಯ್ಕೆ ಸೌಲಭ್ಯ ನೀಡಿರುವುದು ಬಹಿರಂಗವಾಗಿತ್ತು.

ಅಲ್ಲದೆ, ಐರಾವತ ಮತ್ತು ಸಮೃದ್ಧಿ ಯೋಜನೆಗಳಿಗೆ ಬಿಡುಗಡೆಯಾದ ಅನುದಾನ ಅನುಷ್ಠಾನಕ್ಕೆ ತರದೆ ಸದರಿ ಅನುದಾನವನ್ನು 2022ರಲ್ಲಿ ಬಳಸಿ 2018-19ನೇ ಸಾಲಿನ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸದವರಿಗೆ ಅಕ್ರಮವಾಗಿ ಮಂಜೂರಾತಿ ಮಾಡಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮೇಲಿನ ಆಪಾದನೆಗಳು ಎಸಗಿರುವ ಬಗ್ಗೆ ಲಭ್ಯ ದಾಖಲೆಗಳು ಪರಾಮರ್ಶಿಸಿದಾಗ ಸುರೇಶ್ ಕುಮಾರ್ ಅಕ್ರಮ ಎಸಗಿರುವುದು ದೃಢಪಟ್ಟಿತ್ತು. ಆದ್ದರಿಂದ, ಕಳಂಕಿತ ಅಧಿಕಾರಿ ನಿಗಮದ ಎಂಡಿ ಹುದ್ದೆಯಲ್ಲಿ ಮುಂದುವರಿಸಿದಲ್ಲಿ ಸಾಕ್ಷ್ಯ ನಾಶ ಹಾಗೂ ಮುಕ್ತವಾದ ತನಿಖೆಗೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಸರ್ಕಾರಿ ಸೇವೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ.

ನಿಗಮದಲ್ಲಿ 2019-20 ಮತ್ತು 2020-21ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೋಟ್ಯಂತರ ರೂ.ಅನುದಾನ ದುರುಪಯೋಗ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ಸಿಐಡಿ ವಹಿಸಿದೆ. ಇದಕ್ಕೆ ಸಂಬಂಧಪಟ್ಟ ತನಿಖೆ  ಶುರುವಾಗಿವೆ. ಎಂಡಿ ಹುದ್ದೆಯಿಂದ ಸುರೇಶ್ ಕುಮಾರ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದರೂ ಕೆಐಟಿಯಿಂದ ತಡೆಯಾಜ್ಞೆ ತಂದು ಮತ್ತೆ ಹುದ್ದೆಯಲ್ಲಿ ಕುಳಿತು ಕಾರ್ಯಾಭಾರ ನಡೆಸುತ್ತಿದ್ದರು. ಇವರ ಅಕ್ರಮ ಬಗ್ಗೆ ಕೆಲ ದಲಿತ ಸಂಘಟನೆಗಳು, ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ್ದವು.

Leave a Reply

Your email address will not be published. Required fields are marked *