ಕಾರ್ಕಳ:ನಮ್ಮ ಪ್ರತಿಷ್ಠೆ ಸ್ವಾರ್ಥಕ್ಕಾಗಿ ನಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಎಲ್ಲಾ ಧರ್ಮಗಳ ಸಹೋದರು ಒಂದು ಎನ್ನುವ ಭಾವನೆಯಿಂದ ಸ್ನೇಹ, ಬಂಧುತ್ವವನ್ನು ಬೆಸದಾಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವೆಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಸಿರಿಲ್ ಲೋಬೋ ಅಭಿಪ್ರಾಯಪಟ್ಟರು.
ಅವರು ಭಾನುವಾರ ಕಾರ್ಕಳ ಅತ್ತೂರು ಸಂತ ಲಾರೆನ್ಸರ ಬಸಿಲಿಕಾದ ವಾರ್ಷಿಕ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿ, ದಿವ್ಯ ಬಲಿಪೂಜೆ ನೆರವೇರಿಸಿ ಧಾರ್ಮಿಕ ಸಂದೇಶ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಸಿಲಿಕಾದ ಧರ್ಮಗುರುಗಳಾದ ಅಲ್ಬನ್ ಡಿಸೋಜ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಜಾನ್ ಡಿಸಿಲ್ವ ಮುಂತಾದವರು ಹಾಜರಿದ್ದರು.ಜನವರಿ 22ರಿಂದ 26ರವರೆಗೆ 5 ದಿನಗಳ ಕಾಲ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಉಡುಪಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಅತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುತ್ತಾರೆ.
ಮಾಜಿ ಸಿಎಂ ವೀರಪ್ಪ ಮೊಯ್ಲಿ ಭೇಟಿ
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಭಾನುವಾರ ಚರ್ಚಿನ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭೇಟಿ ನೀಡಿ, ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುಧಾಕರ ಸುವರ್ಣ, ಸುರೇಂದ್ರ ಶೆಟ್ಟಿ, ಜಾರ್ಜ್ ಕ್ಯಾಸ್ಟಲಿನೋ, ಪ್ರಕಾಶ್ ಪಿಂಟೋ ಮುಂತಾದವರು ಹಾಜರಿದ್ದರು.