ಅಫ್ಘಾನಿಸ್ತಾನ: ತಾಲಿಬಾನ್ ಸರ್ಕಾರ ಅಪಘಾನಿಸ್ತಾನದ ಎಲ್ಲಾ ಬಟ್ಟೆ ಅಂಗಡಿಗಳಲ್ಲಿನ ಹೆಣ್ಣು ಬೊಂಬೆಗಳ ಮುಖಕ್ಕೆ ಮುಸುಕು ಕಡ್ಡಾಯವಾಗಿ ಧರಿಸಬೇಕೆಂದು ವಿಚಿತ್ರಕಾರಿ ಹೊಸ ಆದೇಶವೊಂದನ್ನು ಹೊರಡಿಸಿದೆ.
ಈ ಹಿಂದೆ ಮುಖ ಕಾಣದಂತೆ ಹಿಜಾಬ್ ಧರಿಸದ ಮಹಿಳಾ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಆದೇಶ ಹೊರಡಿಸಿತ್ತು. ಇದೀಗ ಮಹಿಳೆಯರ ಬಟ್ಟೆಗಳನ್ನು ಪ್ರದರ್ಶನಕ್ಕೆ ಇಡುವಾಗ ಬಳಸುವ ಗೊಂಬೆಗಳ ಮುಖ ಬಹಿರಂಗವಾಗಬಾರದು.
ಹೀಗಾಗಿ ಗೊಂಬೆಗಳ ಮುಖವನ್ನು ಮರೆಮಾಚಬೇಕು ಎಂಬ ನಿಯಮವನ್ನು ಜಾರಿಗೊಳಿಸಿದೆ. ತಾಲಿಬಾನ್ ಸರ್ಕಾರದ ಹೊಸ ಆದೇಶದಂತೆ ಅಫ್ಘಾನಿಸ್ತಾನದಲ್ಲಿರುವ ಬಟ್ಟೆ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿರುವ ಗೊಂಬೆಗಳ ಮುಖ ಮರೆಮಾಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಸದ್ಯ ಪ್ಲಾಸ್ಟಿಕ್ ಚೀಲಗಳಿಂದ ಬಟ್ಟೆ ಅಂಗಡಿಯಲ್ಲಿ ಗೊಂಬೆಗಳ ಮುಖವನ್ನು ಮರೆಮಾಚಿರುವ ಫೋಟೋಗಳು ವೈರಲ್ ಆಗುತ್ತಿವೆ. ತಾಲಿಬಾನ್ ಸರಕಾರದ ಈ ಆದೇಶ ಹಾಸ್ಯಾಸ್ಪದವಾಗಿದ್ದು, ಅಲ್ಲಿನ ನಾಗರಿಕರು ಈ ನೂತನ ನಿಯಮದ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ತಾಲಿಬಾನ್ ಸರ್ಕಾರದ ಈ ನಡೆ ಸರಿಯಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ನಡೆ ತಾಲಿಬಾನ್ ಸರ್ಕಾರದ ದೌರ್ಬಲ್ಯವನ್ನು ಪ್ರತಿಬಿಂಬಿಸುತ್ತದೆ. ಪ್ರಬಲ ಪುರುಷ ಯಾವತ್ತಿದ್ದರೂ ಮಹಿಳೆಯರನ್ನು ನಿಯಂತ್ರಿಸಲು ಮುಂದಾಗುವುದಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿವೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂಗಡಿಯಾತ ಹೇಳಿರುವ ಪ್ರಕಾರ, ಇದಕ್ಕೂ ಮೊದಲು ತಾಲಿಬಾನ್ ಸರ್ಕಾರ ಮನುಷ್ಯಾಕೃತಿಗಳನ್ನು ತೆಗೆದು ಹಾಕಬೇಕು. ಇಲ್ಲವಾದರೆ ಅವುಗಳನ್ನು ಸಂಪೂರ್ಣವಾಗಿ ಶಿರಚ್ಛೇದ ಮಾಡಬೇಕು ಎನ್ನುವ ವಿಚಿತ್ರ ಆದೇಶ ಹೊರಡಿಸಿದೆ.