Share this news

ಮಂಗಳೂರು: ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಕಂಬಳ ಕ್ರೀಡೆ ಆಯೋಜನೆಯಾಗುತ್ತಿದೆ. ಹೀಗೆ ಪ್ರತಿಯೊಂದು ಕಡೆಯು ನಡೆಯುತ್ತಿರುವ ಕಂಬಳದ ಮೇಲೆ ಪ್ರಾಣಿದಯಾ ಸಂಘ ಪೇಟಾ ಕಣ್ಣಿಟ್ಟಿದ್ದು, ಇದೀಗ ಮತ್ತೆ ಕಂಬಳದಲ್ಲಿ ಹಿಂಸಾಚಾರ ನಡೆಯುತ್ತಿರುವ ಬಗ್ಗೆ ದೂರು ನೀಡಿ, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿರುವುದಾಗಿ ಆರೋಪಿಸಿದೆ.

ಹೀಗಾಗಿ ದಕ್ಷಿಣಕನ್ನಡ ಜಿಲ್ಲಾ ಪಶುಸಂಗೋಪನಾ ಇಲಾಖೆ ಜಿಲ್ಲಾ ಕಂಬಳ ಸಮಿತಿಗೆ ನೊಟೀಸ್ ಜಾರಿ ಮಾಡಿದೆ. ಕಳೆದ ಡಿ.೩೧ರಂದು ಮುಲ್ಕಿಯಲ್ಲಿ ನಡೆದ ಕಂಬಳದಲ್ಲಿ ಕೋಣಗಳಿಗೆ ರಕ್ತಬರುವಂತೆ ಬಾರುಕೋಲಿನಲ್ಲಿ ಹೊಡೆದಿರುವ ಫೋಟೋ ಮತ್ತು ವಿಡಿಯೋವನ್ನು ದಾಖಲೆಯಾಗಿರಿಸಿ ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದಾಗಿ ನೋಟೀಸ್ ನೀಡಿ ಎಚ್ಚರಿಸಿದೆ.

ಕೋಣಗಳನ್ನು ಓಟಕ್ಕೆ ಸಿದ್ಧಪಡಿಸುವಾಗ, ಕೆರೆ ಬಿಟ್ಟು ದಡ ಸೇರಿದ ಬಳಿಕ ಕೋಣಗಳಿಗೆ ಹೊಡೆಯುವ ದೃಶ್ಯ ಪೇಟಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಸುಪ್ರೀಂ ಕೋರ್ಟ್ನ ಪಂಚ ಸದಸ್ಯರ ಪೀಠದಲ್ಲಿ ಕಂಬಳ ನಿಷೇಧದ ವಾದ-ಪ್ರತಿವಾದ ನಡೆಯುತಿದ್ದು ಕಂಬಳದ ಋಣಾತ್ಮಕ ವಿಚಾರವನ್ನು ಪೇಟಾ ಪೀಠದ ಮುಂದೆ ಇಡುತ್ತಿದೆ. ಇನ್ನು ಕಂಬಳ ಸಮಿತಿಯ ನಿರ್ಣಯದ ಪ್ರಕಾರ ಕನಿಷ್ಠ ೨೪-೩೦ ಗಂಟೆಯೊಳಗೆ ಕಂಬಳ ಮುಗಿಯಬೇಕು ಆದರೆ ಕೆಲವಡೆ ಕಂಬಳ ೩೫ ಗಂಟೆ ಮೀರಿ ನಡೆಯುತ್ತಿದೆ. ಹೀಗಾಗಿ ಕಂಬಳದಲ್ಲಿ ಕಾನೂನು ಉಲ್ಲಂಘನೆ ತಪ್ಪು ಎಂದು ಕಂಬಳ ಸಮಿತಿ ಹೇಳಿದೆ. ಕಂಬಳ ನಡೆಯುವ ಸಂಧರ್ಭದಲ್ಲಿ ಮೈಕ್ ಮೂಲಕ ಸೂಚನೆ ಕೊಡಲಾಗುತ್ತಿದೆ. ಆದರೂ ಕೆಲವರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಮುಂದೆ ಈ ರೀತಿಯ ಘಟನೆಗಳು ನಡೆದರೆ ಕಂಬಳ ಕೋಣಗಳ ಮಾಲಕರು, ಓಡಿಸುವವರೇ ಜವಾಬ್ದಾರಿ ಎಂದು ಕಂಬಳ ಸಮಿತಿ ಹೇಳಿದೆ.


ರಾಜ್ಯ ಸರ್ಕಾರ ಮಂಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದರಿಂದ ಸದ್ಯ ಕಂಬಳ ಕ್ರೀಡೆ ನಡೆಯುತ್ತಿದೆ. ಆದರೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕಂಬಳ ನಡೆಸಿದರೆ ಮುಂದೆ ಕಂಬಳ ನಿಷೇಧವಾಗುವ ಭೀತಿ ಎದುರಾಗಿದೆ. ಆದ್ದರಿಂದ ಕಂಬಳ ಕೋಣಗಳ ಮಾಲೀಕರು ಹಾಗೂ ಕೋಣ ಓಡಿಸುವವರು ನಿಯಮಗಳನ್ನು ಅನುಸರಿಸುವ ಮೂಲಕ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದು ಕಂಬಳಾಭಿಮಾನಿಗಳು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *