ಕಾರ್ಕಳ: ಜನಪ್ರತಿನಿಧಿಯಾದವನು ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎನ್ನುವ ನಿಟ್ಟಿನಲ್ಲಿ, ಜನರ ಆಶೀರ್ವಾದದಿಂದ ಕಾರ್ಕಳಕ್ಕೆ ಶಾಶ್ವತ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಾಧ್ಯವಾಗಿದೆ. ಕಾರ್ಕಳವನ್ನು ಪ್ರವಾಸೋದ್ಯಮದಲ್ಲಿ ರಾಜ್ಯದಲ್ಲಿ ಮುಂಚೂಣಿ ಕ್ಷೇತ್ರವನ್ನಾಗಿಸಿ ಮಾಡುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳದ ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಮೂರು ಬಾರಿ ಶಾಸಕನಾಗಿದ್ದ ಅವಧಿಯಲ್ಲಿ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ತೃಪ್ತಿ ನನಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ವಾರಾಹಿ ಯೋಜನೆ ಮೂಲಕ 46 ಸಾವಿರ ಕುಟುಂಬಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಹಾಕಿಕೊಳ್ಳಲಾಗಿದೆ,ಕೃಷಿ ಚಟುವಟಿಕೆಗಳಿಗೆ ಹಾಗೂ ಅಂತರ್ಜಲವೃದ್ಧಿಗೆ 150 ಕ್ಕೂ ಅಧಿಕ ಕಿಂಡಿ ಅಣೆಕಟ್ಟು ನಿರ್ಮಾಣ, ರಾಜ್ಯದ 6 ನೇ ರಂಗಾಯಣವಾದ ಯಕ್ಷರಂಗಾಯಣವನ್ನು ಕಾರ್ಕಳದಲ್ಲಿ ಸ್ಥಾಪಿಸಲಾಗಿದೆ.ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜವಳಿ ಪಾರ್ಕ್ ಗೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮುಂದೆಯೂ ನನ್ನ ಕೈಬಲಪಡಿಸುವ ಮೂಲಕ ಕಾರ್ಕಳದ ಸಮಗ್ರ ಅಭಿವೃದ್ಧಿಯ ಕನಸನ್ನು ನನಸು ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬೈಲೂರಿನಲ್ಲಿ ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಸಚಿವ ಸುನಿಲ್ ಕುಮಾರ್ ತುಳುನಾಡಿನ ಕೀರ್ತಿಯನ್ನು ಎತ್ತರಕ್ಕೇರಿಸಿದ್ದಾರೆ ಎಂದರು.
ಸುನಿಲ್ ಕುಮಾರ್ ಕಾರ್ಕಳದ ಆಧುನಿಕ ಪರಶುರಾಮ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸುನಿಲ್ ಕುಮಾರ್ ಪ್ರಯತ್ನ ಶ್ಲಾಘನೀಯ ಅವರು ಕಾರ್ಕಳದ ಆಧುನಿಕ ಪರಶುರಾಮ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.
ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಉದ್ಯಮಿ ಹುರ್ಲಾಡಿ ರಘುವೀರ್ ಶೆಟ್ಟಿ,ಉದಯಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಸುಧೀರ್ ಹೆಗ್ಡೆ,ಗಿರೀಶ್ ಶೆಟ್ಟಿ ತೆಳ್ಳಾರು, ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಸಮಗ್ರ ಮಾಹಿತಿಯನ್ನೊಳಗೊಂಡ ಗೆಜೆಟಿಯರ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.ಗೆಜೆಟಿಯರ್ ಇಲಾಖೆಯ ಪ್ರಧಾನ ಸಂಪಾದಕಿ ಎ.ರಾಜಮ್ಮ ಚೌಡಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಗೆಜೆಟಿಯರ್ ಪುಸ್ತಕದ ಕುರಿತು ಮಾಹಿತಿ ನೀಡಿದರು.