Share this news

ಬೆಂಗಳೂರು  : ಸರ್ಕಾರಿ ಜಮೀನು ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸುವ ಮತ್ತು ಒತ್ತುವರಿದಾರಿಗೆ ನೋಟಿಸ್‌ ನೀಡುವ ಅಧಿಕಾರ ಜಿಲ್ಲಾಧಿಕಾರಿ ಮಾತ್ರ ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಿ ಹೈಕೋರ್ಟ್ ಆದೇಶಿಸಿದೆ.

ಸರ್ಕಾರಿ ಒತ್ತುವರಿ ಸಂಬಂಧ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ತಹಸೀಲ್ದಾರ್‌ ಜಾರಿಗೊಳಿಸಿದ್ದ ನೋಟಿಸ್‌ ರದ್ದು ಕೋರಿ ಬಾಲಪ್ಪ ಸೇರಿದಂತೆ ಎಂಟು ಮಂದಿ ರೈತರು ಸಲ್ಲಿಸಿದ್ದ ತಕರಾರು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್‌.ಇಂದಿರೇಶ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್‌ 94(3) ಮತ್ತು 39(1) ಅಡಿಯಲ್ಲಿ ಅರ್ಜಿದಾರರಿಗೆ ತಹಸೀಲ್ದಾರ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಆದರೆ ಸೆಕ್ಷನ್‌ 39ರ ಪ್ರಕಾರ ಸರ್ಕಾರಿ ಜಮೀನನ್ನು ಯಾರಾದರೂ ಒತ್ತುವರಿ ಮಾಡಿದ್ದರೆ, ಜಿಲ್ಲಾಧಿಕಾರಿ ತೆರವು ಕಾರ್ಯಚರಣೆ ಮಾಡಬೇಕು ಹಾಗೂ ತೆರವಿಗೆ ಆದೇಶ ಮಾಡಬೇಕು. ತೆರವು ಕಾರ್ಯಚರಣೆಗೆ ಮುನ್ನ ಒತ್ತುವರಿದಾರರಿಗೆ ನೋಟಿಸ್‌ ಜಾರಿಗೊಳಿಸಬೇಕು. ನೋಟಿಸ್‌ ಸ್ವೀಕರಿಸಿದ ನಂತರ ಜಾಗದ ತೆರವಿಗೆ ನ್ಯಾಯ ಸಮ್ಮತವಾದ ಸಮಯ ನೀಡಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಒತ್ತುವರಿದಾರರು ನೋಟಿಸ್‌ ಪಾಲಿಸದಿದ್ದರೆ ಜಿಲ್ಲಾಧಿಕಾರಿಯೇ ತೆರವು ಕಾರ್ಯಚರಣೆ ಕೈಗೊಳ್ಳಬೇಕು. ಇಲ್ಲವೇ ತಮ್ಮ ಅಧೀನದ ಅಧಿಕಾರಿಯನ್ನು ತೆರವು ಕಾರ್ಯಾಚರಣೆಗೆ ನಿಯೋಜಿಸಬೇಕು. ತೆರವು ಕಾರ್ಯಾಚರಣೆ ಕೈಗೊಳ್ಳುವ ಅಧಿಕಾರಿಗೆ ಯಾರಾದರೂ ಅಡ್ಡಿಪಡಿಸಿದರೆ, ಆ ಕುರಿತು ಪ್ರಕರಣದ ಸತ್ಯಾಂಶ ತಿಳಿಯಲು ಜಿಲ್ಲಾಧಿಕಾರಿ ಅಥವಾ ಕಂದಾಯ ಅಧಿಕಾರಿ ವಿಚಾರಣೆ ನಡೆಸಬೇಕು. ಸಕಾರಣವಿಲ್ಲದೆ ಅಧಿಕಾರಿಗೆ ಅಡ್ಡಿಪಡಿಸಿರುವುದು ದೃಢಪಟ್ಟಲ್ಲಿ ಮತ್ತು ಅಡ್ಡಿಪಡಿಸುವ ಕಾರ್ಯ ಮುಂದುವರಿಸುತ್ತಿದ್ದರೆ, ಅಂತಹವರನ್ನು ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಿಲ್ಲಾಧಿಕಾರಿಯು ಸರ್ಕಾರಿ ಜಮೀನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸಲು ಅಧಿಕಾರ ಹೊಂದಿರುತ್ತಾರೆ. ಹಾಗಾಗಿ, ಪ್ರಕರಣದಲ್ಲಿ ಅರ್ಜಿದಾರರಿಗೆ ನೋಟಿಸ್‌ ನೀಡಲು ರಾಯಭಾಗ ತಹಸೀಲ್ದಾರ್‌ ಅಧಿಕಾರ ಹೊಂದಿಲ್ಲ. ಅವರು ಸಕ್ಷಮ ಅಧಿಕಾರಿಯೂ ಅಲ್ಲ. ಆದ್ದರಿಂದ ಅವರು 2022ರ ಡಿ.8ರಂದು ಜಾರಿಗೊಳಿಸಿರುವ ನೋಟಿಸ್‌ ರದ್ದುಪಡಿಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧ ಸಕ್ಷಮ ಅಧಿಕಾರಿ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು. ಅದಕ್ಕೆ ಈ ಆದೇಶ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಆದೇಶಿಸಿದೆ

ಅರ್ಜಿದಾರರ ಪರ ವಕೀಲ ಲಕ್ಷ್ಮಣ್‌ ಟಿ. ಮಂಟಗನಿ ವಾದ ಮಂಡಿಸಿ, ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್‌ 39 ಪ್ರಕಾರ ನೋಟಿಸ್‌ ಜಾರಿ ಮಾಡಲು ತಹಸೀಲ್ದಾರ್‌ ಸಕ್ಷಮ ಪ್ರಾಧಿಕಾರವಲ್ಲ. ಹಾಗಾಗಿ ಅವರ ನೋಟಿಸ್‌ ರದ್ದುಪಡಿಸಬೇಕು ಎಂದು ಕೋರಿದ್ದರು. ಅದನ್ನು ಆಕ್ಷೇಪಿಸಿದ್ದ ಸರ್ಕಾರಿ ವಕೀಲರು, ತಹಸೀಲ್ದಾರ್‌ ನೋಟಿಸ್‌ ಜಾರಿ ಮಾಡಿರುವುದು ನ್ಯಾಯಸಮ್ಮತವಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದ್ದರು.

Leave a Reply

Your email address will not be published. Required fields are marked *