ಬೆಂಗಳೂರು : ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಉತ್ಸವ ನಡೆಸುತ್ತೀರಿ, ನಿಮಗೆ ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಸಮವಸ್ತ್ರ ನೀಡಲು ಆಗುವುದಿಲ್ಲವೇ? ನಾಚಿಕೆಯಾಗಬೇಕು ನಿಮಗೆ ಎಂದು ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಈ ಬೆನ್ನಲ್ಲೇ ಸಮವಸ್ತ್ರವನ್ನು ಸಮರ್ಪಕವಾಗಿ ವಿತರಣೆ ಮಾಡಲು ಸಿಎಂ ಬೊಮ್ಮಾಯಿ ಶಿಕ್ಷಣ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ. 2 ವಾರದ ಒಳಗೆ ಸಮವಸ್ತ್ರ ಮತ್ತು ಶೂ ಸಾಕ್ಸ್ ಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಸುಮಾರು 21 ಜಿಲ್ಲೆಗಳ ಶಾಲೆಗಳಿಗೆ ಸಮವಸ್ತ್ರ ನೀಡಲು ಸರ್ಕಾರ ಮೀನಾಮೇಷ ಎಣಿಸಿತ್ತು. ಹೈಕೋರ್ಟ್ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಬೆನ್ನಲ್ಲೇ ಸರ್ಕಾರ ಅಲರ್ಟ್ ಆಗಿದೆ.
ಸರ್ಕಾರಿ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, 1 ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ನೀಡುವಂತೆ ಹೈಕೋರ್ಟ್ 2018ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದಿಂದ ಈ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಕೊಪ್ಪಳದ ಮಾ.ಮಂಜುನಾಥ್ ಎಂಬವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲತಾ ಅವರಿದ್ದ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಕ್ಕಳ ವಿಚಾರದಲ್ಲಿ ಮಲತಾಯಿ ಧೋರಣೆ ಸಹಿಸುವುದಿಲ್ಲ. ಸರ್ಕಾರ ಮಕ್ಕಳಿಗೆ ಸರಿಯಾಗಿ ಸಮವಸ್ತ್ರ ಒದಗಿಸಬೇಕು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಉತ್ಸವ ನಡೆಸುತ್ತೀರಿ, ನಿಮಗೆ ಮಕ್ಕಳಿಗೆ ಸಮವಸ್ತ್ರ ನೀಡಲು ಆಗುವುದಿಲ್ಲವಾ? ನಾಚಿಕೆಯಾಗಬೇಕು ನಿಮಗೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಹಾಗೂ ಎರಡು ವಾರದಲ್ಲಿ ಆದೇಶ ಪಾಲಿಸುವಂತೆ ಖಡಕ್ ಸೂಚನೆ ನೀಡಿತ್ತು.