ಧಾರವಾಡ : ಮುಂದಿನ ವಿಧಾನ ಸಭಾ ಚುನಾವಣೆಗೆ ಈ ಬಾರಿ ಹಿಂದೂ ಹುಲಿ ಪ್ರಮೋದ್ ಮುತಾಲಿಕ್ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಪ್ರಮೋದ್ ಮುತಾಲಿಕ್ ಅವರು ಅವರ ಹುಟ್ಟುಹಬ್ಬದ ಜ.23 ರಂದು ಈಗಾಗಲೇ ಕ್ಷೇತ್ರವನ್ನು ಘೋಷಣೆ ಮಾಡಿದ್ದಾರೆ. ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ. ಹಿಂದೆ ಸರಿಯೋ ಮಾತೇ ಇಲ್ಲ ಎಂದು ಶ್ರೀರಾಮ ಸೇನಾ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಎಚ್ಚರಿಸಿದ್ದಾರೆ.
ಧಾರವಾಡದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಕಳದಲ್ಲಿ ಭ್ರಷ್ಟಾಚಾರ ಬಹಳಷ್ಟಿದೆ. ಕಾರ್ಕಳವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಪ್ರಮೋದ್ ಮುತಾಲಿಕ್ ಅವರು ಸ್ಪರ್ಧೆ ಮಾಡಲಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಹಿಂದೂ ಹೋರಾಟಗಾರರಿಗಾಗಿ ಬಿಜೆಪಿ ಪಕ್ಷ ಅಭ್ಯರ್ಥಿಯನ್ನು ಹಾಕಬೇಡಿ ಎಂದು ಗಂಗಾಧರ ಕುಲಕರ್ಣಿ ಬಿಜೆಪಿಗೆ ಮನವಿ ಮಾಡಿದ್ದಾರೆ.
ಬಜರಂಗದಳ ಶ್ರಿರಾಮ ಸೇನಾ ಮುತಾಲಿಕ್ ಅವರ ಕೊಡುಗೆ ಬಿಜೆಪಿಗೆ ಬಹಳಷ್ಟಿದೆ. ಅವರು ಹಿಂದುತ್ವಕ್ಕಾಗಿ ದುಡಿದಿದ್ದಾರೆ. ದಯವಿಟ್ಟು ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಹಾಕಬೇಡಿ. ಒಂದು ವೇಳೆ ಅಭ್ಯರ್ಥಿ ಹಾಕಿದರೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ಶ್ರಿರಾಮ ಸೇನೆ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಬಿಜೆಪಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಬಿಜೆಪಿ ಪಕ್ಷ ಅನಾಚಾರ ಮಾಡಿದವರನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ, ಮುತಾಲಿಕ್ ಅವರನ್ನ ಪಕ್ಷಕ್ಕೆ ಏಕೆ ಸೇರಿಸುತ್ತಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ ಮಾಡಲಿದ್ದಾರೆ. ಅವರಿಗಾಗಿ ಬಿಜೆಪಿ ಪಕ್ಷ ಅಭ್ಯರ್ಥಿಯನ್ನ ಹಾಕಬಾರದು ಎಂದು ಹೇಳಿದ್ದೇವೆ. ಒಂದು ವೇಳೆ ಅಭ್ಯರ್ಥಿಯನ್ನ ಹಾಕಿದ್ದೆ ಆದರೆ ನಾವು ರಾಜ್ಯದ ಮೂಲೆ ಮೂಲೆಯಿಂದಲೂ ನಮ್ಮ ಕಾರ್ಯಕರ್ತರನ್ನ ಕರೆಸಿ ಕಾರ್ಕಳದಲ್ಲಿ ಸಭೆ ಮಾಡಿ ಮುಂದೆ ಎನು ಮಾಡಬೇಕು ಎಂದು ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಗಂಗಾಧರ ಕುಲಕರ್ಣಿ ಎಚ್ಚರಿಸಿದ್ದಾರೆ.