ಚಿಕ್ಕಮಗಳೂರು: ಇದು ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ. ಬೈಕ್‌ನಲ್ಲಿ ಸೀರೆ ಅಥವಾ ದುಪಟ್ಟಾ ಧರಿಸಿ ಕೂರುವ ಮಹಿಳೆಯರೇ ಎಚ್ಚರ. ಸ್ವಲ್ಪ ಏಮಾರಿದರೂ ಪ್ರಾಣಕ್ಕೆ ಕುತ್ತು ಬಂದೀತು. ಚಿಕ್ಕಮಗಳೂರಿನಲ್ಲಿ ನಡೆದ ಈ ಒಂದು ಘಟನೆ ಎಲ್ಲರಿಗೂ ಪಾಠವಾದೀತು.
ತರೀಕೆರೆ ಪಟ್ಟಣದಲ್ಲಿ ಬೈಕ್‌ನ ಹಿಂಬದಿಯಲ್ಲಿ ಕೂತು ಹೋಗುತ್ತಿದ್ದ ಮಹಿಳೆಯೊಬ್ಬರ ಸೆರಗು ಚಕ್ರಕ್ಕೆ ಸಿಕ್ಕಿ, ನಂತರ ಆಕೆಯ ಕಾಲು ಕೂಡ ಚಕ್ರದೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ತರೀಕೆರೆಯ ಇಟ್ಟಿಗೆ ಗ್ರಾಮದ ಯಶೋಧಾ ಬಾಯಿ ಈ ಅಪಘಾತಕ್ಕೆ ಒಳಗಾದ ಮಹಿಳೆ.
ಮಹಿಳೆಯ ಕಾಲು ಗೇರ್ ಬಾಕ್ಸ್ ಮೂಲಕ ಚಕ್ರದ ಒಳಗೆ ಸಿಲುಕಿ ಮಹಿಳೆ ಯಶೋದಾ ಬಾಯಿ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಬೈಕ್ ಸವಾರ ಹಾಗೂ ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಕಾಲನ್ನ ಹೊರಕ್ಕೆ ತೆಗೆಯಲು ಸಾಧ್ಯವಾಗಿಲ್ಲ. ಸುಮಾರು ಒಂದು ಗಂಟೆಗಳ ಕಾಲ ಮಹಿಳೆ ನೋವಿನಿಂದ ನರಳಾಡಿದ್ದಾರೆ. ಬಳಿಕ ಬೈಕಿನ ಚೈನ್ ಕಟ್ ಮಾಡಿ, ಗೇರ್ ಬಾಕ್ಸ್ ಬಿಚ್ಚಿ ಮಹಿಳೆಯ ಕಾಲನ್ನು ಹೊರ ತೆಗೆದಿದ್ದಾರೆ.
ಇಂತಹ ಘಟನೆಗಳು ಆಗಾಗ ನಡೆಯುತ್ತಿದ್ದರೂ ಕೂಡ ಬೈಕ್ ಪ್ರಯಾಣಿಕರು ಯಾವ ಮುನ್ನೆಚ್ಚರಿಕೆ ಇಲ್ಲದೇ ಹೋಗುವುದನ್ನು ಕಾಣುತ್ತೇವೆ. ಬೈಕ್‌ನಲ್ಲಿ ಸ್ಯಾರಿ ಗಾರ್ಡ್ ಯಾಕೆ ಮುಖ್ಯ ಎನ್ನುವುದಕ್ಕೆ ಈ ಘಟನೆ ಒಂದು ನಿದರ್ಶನವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಪ್ರಯಾಣಿಕರಿಗಾಗಿ ಸ್ಯಾರಿ ಗಾರ್ಡ್, ಹ್ಯಾಂಡ್ ಗ್ರಿಪ್ ಇರುವುದನ್ನು ಸುಪ್ರೀಂಕೋರ್ಟ್ 2028ರಲ್ಲಿ ಕಡ್ಡಾಯಗೊಳಿಸಿತ್ತು.
ಬೈಕ್‌ನ ಚಕ್ರಗಳಲ್ಲಿ ಸ್ಪೋಕ್ಸ್ ಇರುವುದರಿಂದ ಸೀರೆ ಬಹಳ ಬೇಗನೆ ಸಿಕ್ಕಿಕೊಳ್ಳುತ್ತದೆ. ಆದ್ದರಿಂದ ಚಕ್ರದ ಕನಿಷ್ಠ ಅರ್ಧಭಾಗದವರೆಗಾದರೂ ರಕ್ಷಣಾ ಕವಚ (ಪ್ರೊಟೆಕ್ಷನ್ ಗಾರ್ಡ್) ಅಳವಡಿಸಬೇಕು ಎಂದು ಕೇಂದ್ರ ಮೋಟಾರು ವಾಹನ ನಿಯಮಗಳು ಹೇಳುತ್ತವೆ.ಆದರೂ ಕೂಡ ಸ್ಯಾರಿ ಗಾರ್ಡ್ ಇಲ್ಲದ ಬಹಳಷ್ಟು ವಾಹನಗಳಲ್ಲಿ ಇಂದಿಗೂ ಸ್ಯಾರಿ ಗಾರ್ಡ್ ಅಳವಡಿಸಿಲ್ಲ.
ಬೈಕ್‌ನ ಹಿಂಬದಿಯಲ್ಲಿ ಕೂರುವ ಮಹಿಳೆಯರು ಸೀರೆ ತೊಟ್ಟಿದ್ದರೆ ಅದರ ಸೆರಗು ಚಕ್ರಕ್ಕೆ ಸಿಲುಕಬಹುದು. ಅಥವಾ ದುಪಟ್ಟಾ ಗಾಳಿಯಲ್ಲಿ ಹಾರಿ ಚಕ್ರಕ್ಕೆ ಸಿಲುಕಬಹುದು. ಇಂಥ ಘಟನೆಯಲ್ಲಿ ಮಹಿಳೆಯರು ಕೆಳಗೆ ಬಿದ್ದು ಸಾವನ್ನಪ್ಪುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಸ್ಯಾರಿ ಗಾರ್ಡ್ ಇಲ್ಲದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸೀಟಿನಲ್ಲಿ ಕೂರುವ ಮಹಿಳೆಯರು ತಮ್ಮ ವಸ್ತ್ರದ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ.