ಅಜೆಕಾರು : ಕಾರ್ಕಳ ತಾಲೂಕು ಮರ್ಣೆ ಗ್ರಾಮದ ದೆಪ್ಪುತ್ತೆ ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ದೆಪ್ಪುತ್ತೆ ನಿವಾಸಿ ರಾಜು ಮೇರ( 53 ವರ್ಷ) ಆತ್ಮಹತ್ಯೆ ಮಾಡಿಕೊಂಡವರು.
ಅವರಿಗೆ ಹತ್ತು ವರ್ಷಗಳ ಹಿಂದೆ ಬಾಯಿಯ ಕ್ಯಾನ್ಸರ್ ಆಗಿ ಚಿಕಿತ್ಸೆ ಪಡೆದಿದ್ದರು. ನಂತರದ ದಿನಗಳಲ್ಲಿ ವಿಪರೀತ ತಲೆನೋವು ಕಾಣಿಸಿಕೊಂಡಿದ್ದು ಅದಕ್ಕೂ ಚಿಕಿತ್ಸೆ ಪಡೆದಿದ್ದರು. ಸುಮಾರು ಮೂರು ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಕಣ್ಣಿಗೆ ಗಾಯವಾಗಿ ಎಡಬದಿಯ ಕಣ್ಣು ಕಾಣುತ್ತಿರಲಿಲ್ಲ. ಜೊತೆಗೆ ವಿಪರೀತ ತಲೆನೋವು ಕೂಡ ಪ್ರಾರಂಭವಾಗಿತ್ತು.
ಬುಧವಾರ ರಾತ್ರಿ ಪತ್ನಿಯ ಬಳಿ ತನಗೆ ವಿಪರೀತ ತಲೆನೋವೆಂದು ಹೇಳಿದ್ದ ರಾಜು ಮೇರ ಅವರು ಮುಂಜಾನೆ 4 ಗಂಟೆಯವರೆಗೆ ನಿದ್ರಿಸಿರಲಿಲ್ಲ. ಆ ಬಳಿಕ ಅವರ ಪತ್ನಿ ವಸಂತಿ ಅವರು ನಿದ್ರೆಗೆ ಜಾರಿದ್ದು ಗುರುವಾರ ಮುಂಜಾನೆ 7.30ರ ವೇಳೆಗೆ ಎದ್ದು ನೋಡಿದಾಗ ರಾಜು ಮೇರ ಅವರು ಮನೆಯಲ್ಲಿ ಕಾಣಿಸದಿದ್ದಾಗ ಅವರನ್ನು ಹುಡುಕಾಡಿದಾಗ ಮನೆ ಮುಂದೆ ಇರುವ ಹಾಡಿಯಲ್ಲಿ ಗೇರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು .
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.