ಮೈಸೂರು: ಇಂದು ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಸಡಗರ ಕಳೆಗಟ್ಟಿದ್ದು ಬೆಳಗ್ಗೆಯಿಂದ ಭಕ್ತಾದಿಗಳು ಶಿವದೇಗುಲಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ
ಪ್ರಮುಖವಾಗಿ ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಜಯರಾಜೇಂದ್ರ ಒಡೆಯರ್ ಅವರು, ತ್ರಿನೇಶ್ವರನಿಗೆ ಬರೋಬ್ಬರಿ 11 ಕೆಜಿ ತೂಕದ ಚಿನ್ನದ ಮುಖವಾಡ ಕೊಡುಗೆಯಾಗಿ ನೀಡಿದ್ದು, ಶಿವಲಿಂಗಕ್ಕೆ ಚಿನ್ನದ ಮುಖವಾಡ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಹಿನ್ನೆಲೆ ಚಿನ್ನದ ಮುಖವಾಡವನ್ನು ಕೊಡಿಗೆಯಾಗಿ ಅರ್ಪಿಸಿದ್ದಾರೆ. ಪ್ರತಿ ವರ್ಷವೂ ಮಹಾಶಿವರಾತ್ರಿ ದಿನ ಚಿನ್ನದ ಮುಖವಾಡವನ್ನು ಧಾರಣೆ ಮಾಡಿ ಪೂಜೆ ಮಾಡಲಾಗುತ್ತದೆ. ವರ್ಷಕ್ಕೊಮ್ಮೆ ಶಿವಲಿಂಗಕ್ಕೆ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ. ಈ ವರ್ಷವೂ ಕೂಡ ಶಿವಲಿಂಗಕ್ಕೆ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ನಾಳೆ ಸರ್ಕಾರಿ ರಜೆ ಇರುವುದರಿಂದ ನಾಳೆಯೂ ಕೂಡ ದರ್ಶನಕ್ಕೆ ಅವಕಾಶ ನೀಡಲಾಗಿದೆ.