ಮಂಗಳೂರು: ಬಿಲ್ಲವ ಹಾಗೂ ಈಡಿಗ ಸೇರಿ ಒಟ್ಟಾರೆ 26 ಒಳಜಾತಿಗಳುಳ್ಳ ಸಮುದಾಯಕ್ಕೆ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಇದೀಗ ಬಜೆಟ್‌ನಲ್ಲಿ ನಯಾಪೈಸೆ ಅನುದಾನ ಘೋಷಣೆ ಮಾಡದೇ ಬಿಲ್ಲವ ಸಮುದಾಯಕ್ಕೆ ಮುಖ್ಯಮಂತ್ರಿಗಳು ಹಾಗೂ ಈಡಿಗ ಸಮುದಾಯದ ಸಚಿವರು ವಂಚಿಸಿದ್ದಾರೆ ಎಂದು ಸತ್ಯಜಿತ್ ಸುರತ್ಕಲ್ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಮಾತನಾಡಿದ ಸತ್ಯಜಿತ್ ಸುರತ್ಕಲ್, ಶೈಕ್ಷಣಿಕ, ಆರ್ಥಿಕ ಏಳಿಗೆಗೆ ನಿಗಮ ಅಗತ್ಯವಾಗಿದ್ದು 15 ಜಿಲ್ಲೆಗಳಲ್ಲಿ ನಾರಾಯಣ ಗುರು ವಿಚಾರ ವೇದಿಕೆಯ ಸಂಘಟನೆ ಇದೆ. ರಾಜ್ಯಾದ್ಯಂತ ಹೋರಾಟದ ಶಕ್ತಿ ಇದೆ. ಹಾಗಾಗಿ ಹೋರಾಟ ಮುಂದುವರಿಸುತ್ತೇವೆ. ಅದಕ್ಕಿಂತ ಮೊದಲು ಸರಕಾರದಿಂದ ಆದ ಲೋಪ ಸರಿಪಡಿಸಬೇಕು. ಫೆ.24ರವರೆಗೆ ನಡೆಯುವ ಅಧಿವೇಶನ ದಲ್ಲಿ ನಿಗಮ ಘೋಷಿಸಿ 500 ಕೋಟಿ ರೂ ಮೀಸಲಿಡಬೇಕು. ಇಲ್ಲವಾದರೆ ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಡಿಗ ಮುಖಂಡರಾದ ದಿ.ಬಂಗಾರಪ್ಪ ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು. ಅಲ್ಲದೇ ಸಮುದಾಯದ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸರ್ಕಾರದ ಮೋಸದ ಮಾತಿಗೆ ಮರುಳಾಗಿ ತಮ್ಮ ಪ್ರತಿಭಟನೆ ಹಿಂತೆಗೆದಿದ್ದ ಶಿವಮೊಗ್ಗ ಮತ್ತು ಮಂಗಳೂರು ಹಾಗೂ ಇತರೇ ಜಿಲ್ಲೆಗಳಲ್ಲಿ ಈಡಿಗ ಸಮುದಾಯದ ಎಲ್ಲಾ 24 ಪಂಗಡಗಳು ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಲು ಸಜ್ಜಾಗಿವೆ ಎಂದರು. ಸದ್ಯದಲ್ಲೇ ಈಡಿಗರ ಆಕ್ರೋಶದ ಬಿಸಿ ಸರ್ಕಾರಕ್ಕೆ ಮುಟ್ಟಲಿದ್ದು,ಸರ್ಕಾರ ಈ ವಿಚಾರವನ್ನು ಹೇಗೆ ಎದುರಿಸುತ್ತದೆ ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ.