Share this news

ಹೆಬ್ರಿ: ಯುವಕರಲ್ಲಿ ಹಾಗೂ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಕೋಮು ಸಂಘರ್ಷವನ್ನು ಸೃಷ್ಟಿಸಿ ಆ ಮೂಲಕ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವುದೇ ಬಿಜೆಪಿಯ ಪ್ರಮುಖ ಉದ್ದೇಶವಾಗಿದೆ ಎಂದು ರಾಜ್ಯ ಜೆಡಿಎಸ್ ಮಾಧ್ಯಮ ವಕ್ತಾರ ಹಾಗೂ ಶಿವಮೊಗ್ಗ ಹಾಸನ ಜಿಲ್ಲಾ ಚುನಾವಣಾ ಉಸ್ತುವಾರಿ ಮಹೇಶ್ ಗೌಡ ಆರೋಪಿಸಿದರು.

ಅವರು ಹೆಬ್ರಿ ತಾಲೂಕಿನ ಚೈತನ್ಯ ಸಭಾಭವನದಲ್ಲಿ ಫೆಬ್ರವರಿ 19ರಂದು ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ, ಕೇವಲ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮಾಡಿದರೆ ಸಾಲದು ಇದರ ಜತೆಗೆ ಜನರ ವೈಯುಕ್ತಿಕ ಬದುಕನ್ನು ಗಟ್ಟಿಗೊಳಿಸುವ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.


ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ವಿ ಶೆಟ್ಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಕಳದಲ್ಲಿ ಈ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ, ಉತ್ಸವಗಳಿಂದ ಬಡವರ ಹೊಟ್ಟೆ ತುಂಬುವುದಿಲ್ಲ ಬದಲಾಗಿ ಬಡವರ ಬದುಕಿಗೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಕಲ್ಪಿಸುವ ಕೆಲಸವಾಗಬೇಕು, ರಾಜ್ಯದಲ್ಲಿ ಈ ಹಿಂದೆ ಕುಮಾರಸ್ವಾಮಿ ಸರ್ಕಾರವು ಲಾಟರಿ ಹಾಗೂ ಮದ್ಯ ಮಾರಾಟ ನಿಷೇಧಿಸುವ ಮೂಲಕ ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಾಡಿದೆ.ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ವರ್ಗದ ಜನರ ಹಿತ ಕಾಯಲಾಗುವುದು ಎಂದರು. ಇದೇ ವೇಳೆ ಕಾರ್ಕಳ ವಿಧಾನ ಸಭಾ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಕಾಂತ್ ಪೂಜಾರಿ ಕುಚ್ಚೂರು ಅವರನ್ನು ಅಧಿಕೃತವಾಗಿ ಘೋಷಿಸಲಾಯಿತು.


ಜೆಡಿಎಸ್ ರಾಜ್ಯ ಮುಖಂಡ ಪ್ರವೀಣ್ ಚಂದ್ರ ಮಾತನಾಡಿ,ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಾರಾಯಣಗುರು ನಿಗಮ ರಚಿಸುವುದಾಗಿ ಭರವಸೆ ನೀಡಿತ್ತು, ಆದರೆ ಈ ಬಾರಿಯ ಬಜೆಟ್ ನಲ್ಲಿ ನಿಗಮಕ್ಕೆ ನಯಾಪೈಸೆ ಅನುದಾನ ನೀಡಿಲ್ಲ, ಬಿಜೆಟ್ ಸಿದ್ಧಪಡಿಸುವ ವೇಳೆ ಕರಾವಳಿ ಭಾಗದ ಬಿಲ್ಲವ ಸಮುದಾಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಸುನಿಲ್ ಕುಮಾರ್ ಎಲ್ಲಿದ್ದರು ಎಂದು ಪ್ರಶ್ನಿಸಿದರು. ಜನರು ಸಮಸ್ಯೆಗಳ ಪರಿಹಾರಕ್ಕೆ ಸಚಿವರ ಕಚೇರಿಗೆ ಹೋದರೆ ನೀವೇಕೆ ಇಲ್ಲಿ ಬಂದಿದ್ದೀರಿ ಅಧಿಕಾರಿಗಳಿಗೆ ಏನಾದರೂ ಕೊಟ್ಟು ಕೆಲಸ ಮಾಡಿಸಿಕೊಳ್ಳಿ ಎನ್ನುವವರು ಜನಪ್ರತಿನಿಧಿಗಳಾಗಿ ಇರುವುದು ನಮ್ಮ ದುರಂತ ಎಂದರು.
ಜೆಡಿಎಸ್ ಅಭ್ಯರ್ಥಿ ಶ್ರೀಕಾಂತ್ ಕುಚ್ಚೂರು ಮಾತನಾಡಿ, ಸಾಮಾನ್ಯ ರಿಕ್ಷಾ ಚಾಲಕನಾಗಿರುವ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಜನರು ನನಗೆ ಈ ಬಾರಿ ಆಶೀರ್ವದಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಇಬ್ರಾಹಿಂ ಮರವಂತೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ,ಯುವ ಜನತಾ ದಳ ಅಧ್ಯಕ್ಷ ಸಂಜಯ್, ಜೆಡಿಎಸ್ ಪ್ರಮುಖರಾದ ಉದಯ ಶೆಟ್ಟಿ, ಮಾರುತಿ, ರಜಾಕ್,ಸುರೇಶ್ ದೇವಾಡಿಗ,ಹರೀಶ್ ಮುದ್ರಾಡಿ,ಪೈಝಲ್ ಅಹಮ್ಮದ್,ರಮೇಶ್ ಕುಂದಾಪುರ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *