Share this news

ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಕೆಲ ಫೋಟೋಗಳನ್ನು ಐಪಿಎಸ್ ಡಿ. ರೂಪಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದೆ.
ಈ ವಿಚಾರವಾಗಿ ಇಬ್ಬರು ಮಹಿಳಾ ಅಧಿಕಾರಿಗಳ ಮಧ್ಯೆ ಜ್ವಾಲಾಗ್ನಿ ಹೊತ್ತಿ ಉರಿಯುತ್ತಿದೆ. ಇದೀಗ IAS, IPS ಅಧಿಕಾರಿಗಳಿಬ್ಬರ ನಡುವಿನ ವೈಯಕ್ತಿಕ ಯುದ್ಧ ವಿಧಾನಸೌಧಕ್ಕೆ ತಲುಪಿದ್ದು, ಇದಕ್ಕೆ ಸಿಡಿದೆದ್ದ  ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಇಬ್ಬರಿಗೂ ಖಡಕ್ ಸೂಚನೆ ಕೊಟ್ಟಿದ್ದಾರೆ. ಈ ಮೂಲಕ  IAS v/s IPS ನಡುವಿನ ಸೇಡಿನ ಸಮರಕ್ಕೆ ಅಂತ್ಯ ಹಾಡಿದ್ದಾರೆ.

ನಿಮ್ಮಿಬ್ಬರ ನಡೆಯಿಂದ ರಾಜ್ಯ ಸರ್ಕಾರಕ್ಕೆ ಮುಜುಗರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಏನನ್ನೂ ಪೋಸ್ಟ್ ಮಾಡಬಾರದು. ಇಬ್ಬರೂ ಸಹ ಮಾಧ್ಯಮಗಳ ಮುಂದೆ ಹೋಗಬಾರದು. ಈ ವಿಚಾರಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಹೋಗಬಾರದು ಎಂದು ಪ್ರತ್ಯೇಕವಾಗಿ ದೂರು ನೀಡಲು ಬಂದಿದ್ದ ಡಿ.ರೂಪಾ ಹಾಗೂ ರೋಹಿಣಿ ಸಿಂಧೂರಿ ಇಬ್ಬರಿಗೂ ಸಿಎಸ್ ವಂದಿತಾ ಶರ್ಮಾ ಖಡಕ್ ಸೂಚನೆ ನೀಡಿ ಕಳುಹಿಸಿದ್ದಾರೆ.

ನಿನ್ನೆಯಿಂದಲೂ ಈ ಇಬ್ಬರ ನಡುವೆ ಸೋಶಿಯಲ್ ಮಿಡಿಯಾದಲ್ಲಿ ಆರೋಪ-ಪ್ರತ್ಯಾರೋಪಗಳ ಜಟಾಪಟಿ ತಾರಕ್ಕಕೇರಿದ್ದು, ಸಾರ್ವಜನಿಕರು ಇಬ್ಬರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬೆಳವಣಿಗೆ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತದೆ ಎಂದು ತಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಮ್ಮ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದರು.

ದೂರು ಪ್ರತಿದೂರು:

ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಎಐಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಮರ ಸಾರಿದ್ದಾರೆ. ಪರ್ಸನಲ್ ಫೋಟೋ ರಿಲೀಸ್ ಮಾಡಿದ್ದಕ್ಕೆ ಗರಂ ಆಗಿದ್ದು, ವಿಧಾನಸೌಧದಲ್ಲಿ ವಂದಿತಾ ಶರ್ಮ ಅವರ ಜೊತೆ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿ ಮೂರು ಪುಟಗಳ ದೂರು ನೀಡಿದ್ದಾರೆ. ಇದರ ಬೆನ್ಲಲ್ಲೇ ಡಿ.ರೂಪಾ ಕೂಡ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಿದ್ದಾರೆ. ಸುಮಾರು 35 ನಿಮಿಷಗಳ ಕಾಲ ಚರ್ಚೆ ಮಾಡಿದ್ದು, ರೋಹಿಣಿ ವಿರುದ್ಧ ಕ್ರಮಕೈಗೊಳ್ಳುವಂತೆ ದಾಖಲೆ ಸಮೇತ ದೂರು ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಇದೀಗ ಇಬ್ಬರು ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳ ಕಾಳಗ ಈಗ ಹಾದಿ ರಂಪ, ಬೀದಿ ರಂಪಾಟಕ್ಕೆ ಮುಖ್ಯಕಾರ್ಯದರ್ಶಿ ಸದ್ಯ ಬ್ರೇಕ್ ಹಾಕಿದ್ದಾರೆ. ಆದರೆ ಈ ಅಧಿಕಾರಿಗಳ ವಿರುದ್ಧ ಏನು ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *