ಕಾರ್ಕಳ:ನಮ್ಮ ಸರ್ಕಾರ ಮಲೆಕುಡಿಯ ಸಮುದಾಯದ ಅಭಿವೃದ್ಧಿಗೆ ಗರಿಷ್ಠ ಅನುದಾನ ನೀಡಿದ್ದು ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಮಾಳ ಗ್ರಾಮದ ಪೇರಡ್ಕ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಉಡುಪಿ ಜಿಲ್ಲಾ ಮಲೆಕುಡಿಯ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದರು.
ಬುಡಕಟ್ಟು ಜನಾಂಗ ವಾಸವಾಗಿರುವ ಎಲ್ಲಾ ಕಡೆಗಳಲ್ಲಿ ನಿವೇಶನ, ವಸತಿ, ರಸ್ತೆ,ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ಮಲೆಕುಡಿಯ ಜನಾಂಗ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬರುವ ಸನ್ನಿವೇಶ ನಿರ್ಮಾಣವಾಗುವುದಿಲ್ಲ. ಈಗಾಗಲೇ ಶೇ 90 ರಷ್ಟು ಮಲೆಕುಡಿಯ ಜನಾಂಗದ ಅಭಿವೃದ್ಧಿ ಸಾಧಿಸಲಾಗಿದೆ.ಸರಕಾರಿ ಉದ್ಯೋಗಗಳು, ಉನ್ನತ ಶಿಕ್ಷಣಗಳು ಈ ಸಮುದಾಯಕ್ಕೆ ಸಿಗಬೇಕಾಗಿದೆ ಎಂದರು.
ಸಮುದಾಯ ಭವನ ಕೇವಲ ಶುಭಕಾರ್ಯಕ್ರಮಗಳಿಗೆ ಸೀಮಿತವಾಗದೇ ಸಮುದಾಯದ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳು ನಡೆಯಬೇಕೆಂದರು. ಮಲೆಕುಡಿಯ ಜನಾಂಗ ಮುಂದಿನ ಚುನಾವಣೆಯಲ್ಲಿ ನನ್ನನ್ನು ಚುನಾಯಿಸಿದರೆ ಮಲೆಕುಡಿಯ ಜನಾಂಗದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಮಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ರಕ್ಷಿತಾ ಶೆಟ್ಟಿ, ಕಾರ್ಕಳ ತಹಶಿಲ್ದಾರ್ ಅನಂತ ಶಂಕರ,ಕಾರ್ಕಳ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ದೂದ್ ಪೀರ್,ಪಿ.,ಐಟಿಡಿಪಿ ಮ್ಯಾನೇಜರ್ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ವಂದಿಸಿದರು. ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.