ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ವಿರೂಪಾಕ್ಷಪ್ಪ ಅವರನ್ನು ಬಂಧಿಸಲು ಸಿದ್ದತೆ ನಡೆಸಿದ್ದಾರೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಲಂಚ ಪ್ರಕರಣ ಕುರಿತಂತೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಎಫ್ಐಆರ್ ದಾಖಲಿಸಿ ದ್ದು, ಅವರೇ ಮೊದಲನೇ ಆರೋಪಿಯಾಗಿದ್ದು, ಎರಡನೇ ಆರೋಪಿಯಾಗಿ ಅವರ ಪುತ್ರ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕ ಪ್ರಶಾಂತ್ ಹೆಸರು ಉಲ್ಲೇಖವಾಗಿದೆ.
ತನ್ನ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಶುಕ್ರವಾರ ಮಾಡಾಳು ವಿರೂಪಾಕ್ಷಪ್ಪ ಅವರು ಸರ್ಕಾರಿ ಸ್ವಾಮ್ಯದ ಕೆಎಸ್‌ಡಿಎಲ್ (ಕರ್ನಾಟಕ ಸೋಫ್ಸ್ ಅಂಡ್ ಡಿಟರ್ಜೆಂಟ್ಸ್ ಲಿ.) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಲೋಕಾಯುಕ್ತ ಪೊಲೀಸರು ಮಾಡಾಳು ವಿರೂಪಾಕ್ಷಪ್ಪ ಅವರನ್ನು ಬಂಧಿಸಲು ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಲಂಚ ಪ್ರಕರಣದಲ್ಲಿ ತಮ್ಮ ಪುತ್ರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬೆನ್ನಲ್ಲೇ ಬಂಧನ ಭೀತಿಗೊಳಗಾಗಿ ತಲೆಮರೆಸಿಕೊಂಡಿರುವ ಮಾಡಾಳು ವಿರೂಪಾಕ್ಷಪ್ಪ ಅವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಪುತ್ರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಮಾಹಿತಿ ತಿಳಿದ ಕೂಡಲೇ ತಮ್ಮ ಸ್ವಕ್ಷೇತ್ರ ಚನ್ನಗಿರಿಯಲ್ಲಿದ್ದ ವಿರೂಪಾಕ್ಷಪ್ಪ ಅವರು, ರಾತ್ರೋರಾತ್ರಿ ತಮ್ಮ ಹಿರಿಯ ಮಗ ಮಲ್ಲಿಕಾರ್ಜುನ್ ಜತೆ ಬೆಂಗಳೂರಿಗೆ ಬಂದಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೆ ಶುಕ್ರವಾರ ಬೆಳಗ್ಗೆ ತಮ್ಮ ಹುದ್ದೆಗೆ ಕೆಎಸ್‌ಡಿಎಲ್ ಅಧ್ಯಕ್ಷ ಹುದ್ದೆಗೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಬೆಂಬಲಿಗರ ಮೂಲಕವೇ ವಿರೂಪಾಕ್ಷಪ್ಪ ಕಳುಹಿಸಿಕೊಟ್ಟಿದ್ದಾರೆ.
ಚನ್ನಗಿರಿಯಲ್ಲಿ ಗುರುವಾರ ರಾತ್ರಿ ಕೊನೆ ಬಾರಿಗೆ ಶಾಸಕ ವಿರೂಪಾಕ್ಷಪ್ಪ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬೆಂಗಳೂರಿಗೆ ಬಂದಿರುವ ಮಾಹಿತಿ ಇದೆ. ಹೀಗಾಗಿ ಪೊಲೀಸರು ನಗರದಲ್ಲಿ ಹುಡುಕಾಟ ನಡೆಸಿದ್ದು ಶನಿವಾರ ಬೆಳಗ್ಗೆ ಹೊತ್ತಿಗೆ ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ