Share this news

ಕಾರ್ಕಳ: ಕಾರ್ಕಳ ತಾಲೂಕು ಕಚೇರಿ ಬಳಿ ಇರುವ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು ಹೊಸದಾಗಿ ವಿಸ್ತರಿಸಲಾದ ರೊ// ಕೆ. ಕೃಷ್ಣ ಪ್ರಭು ಒಪಿಡಿ ಬ್ಲಾಕ್ ಮತ್ತು ಹೊಸ ಆಪರೇಷನ್ ಥಿಯೇಟರ್ ಕಾಂಪ್ಲೆಕ್ಸ್ ಮಾರ್ಚ್.7 ಲೋಕಾರ್ಪಣೆಗೊಳ್ಳಲಿದೆ ಎಂದು ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ್ ಹೇಳಿದರು.

ಅವರು ಶನಿವಾರ ಕಾರ್ಕಳ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆಸ್ಪತ್ರೆಯು ಕಾರ್ಕಳದ ಹೃದಯಭಾಗದಲ್ಲಿದ್ದು, ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಿಶ್ವಾಸಾರ್ಹ ಮತ್ತು ನಂಬುಗೆಯ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದರು.

ಸಚಿವರಾದ ವಿ. ಸುನಿಲ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಾಹೆ ಮಣಿಪಾಲ ಆರೋಗ್ಯ ವಿಜ್ಞಾನ ಸಹ ಉಪ ಕುಲಪತಿಗಳಾದ ಡಾ. ಶರತ್ ಕುಮಾರ್ ರಾವ್ ಹಾಗೂ ಮಣಿಪಾಲ ಮಾಹೆಯ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಣಿಪಾಲ ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ರೋಟರಿ ಸ್ನೇಹಿತರು ಹಾಗೂ ಹಿರಿಯ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.

ಶೀಘ್ರದಲ್ಲೇ 24×7 ಎಮರ್ಜೆನ್ಸಿ ಸೇವೆ ,ಟ್ರೋಮಾ ಸೆಂಟರ್ ಕಾರ್ಯಾರಂಭ:

ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಒಳರೋಗಿ,ಹೊರರೋಗಿ ವಿಭಾಗ ಸೇರಿದಂತೆ ಆಧುನಿಕ ಚಿಕಿತ್ಸಾ ಸೌಲಭ್ಯಗಳೊಂದಿಗೆ ಕಾರ್ಯಾಚರಿಸುತ್ತಿದ್ದು,ಶೀಘ್ರವೇ ಎಮರ್ಜೆನ್ಸಿ ಸೇವೆ ಹಾಗೂ ಟ್ರೋಮಾ ಸೆಂಟರ್ ಕೂಡ ಕಾರ್ಯಾರಂಭವಾಗಲಿದೆ, ಇದರಿಂದ ಅಪಘಾತಕ್ಕೆ ಒಳಗಾದ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗಲಿದೆ.ಇದರಿಂದ ಸಮಯ, ಹಣದ ಜತೆಗೆ ಅಮೂಲ್ಯ ಜೀವರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಡಾ.ಕೀರ್ತಿನಾಥ ಬಲ್ಲಾಳ್ ಹೇಳಿದರು


ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಹೃದಯಶಾಸ್ತ್ರ, ನರರೋಗ ಶಾಸ್ತ್ರ, ಕ್ಯಾನ್ಸರ್ (ಸರ್ಜಿಕಲ್ ಕ್ಯಾನ್ಸರ್ ಮತ್ತು ಪ್ರಶಾಮಕ ಚಿಕಿತ್ಸೆ) ಮತ್ತು ಮೂತ್ರಪಿಂಡ ಶಾಸ್ತ್ರದ ಸೂಪರ್ ಸ್ಪೆಷಾಲಿಟಿ ವಿಭಾಗಗಳ ಸಲಹೆಗಾರರ ನಿಯಮಿತ ಭೇಟಿಗಳ ಜೊತೆಗೆ ಅಸ್ತಿತ್ವದಲ್ಲಿರುವ ಜನರಲ್ ಮೆಡಿಸಿನ್, ಮಕ್ಕಳ ವಿಬಾಗ, ನೇತ್ರಶಾಸ್ತ್ರ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಇಎನ್‌ಟಿ , ಅರಿವಳಿಕೆ ಮತ್ತು ಚರ್ಮ ರೋಗ ವಿಬಾಗದ ಸೌಲಭ್ಯವು ಮುಂದುವರಿಯುತ್ತದೆ. ಆಸ್ಪತ್ರೆಯು ಮೇಲ್ದರ್ಜೆಗೇರಿಸಿದ ಲ್ಯಾಬ್ ಸೌಲಭ್ಯವನ್ನು ಹೊಂದಿದ್ದು, ಮನೆಯಿಂದ ಮಾದರಿ ಸಂಗ್ರಹಣೆ ಸೌಲಭ್ಯ ಮತ್ತು ಆಂಬ್ಯುಲೆನ್ಸ್ ಸೌಲಭ್ಯವನ್ನು ಹೊಂದಿದೆ. ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯು ಕಳೆದ 2 ವರ್ಷಗಳಿಂದ ಡಯಾಲಿಸಿಸ್ ಸೌಲಭ್ಯವನ್ನು ವಿಸ್ತರಿಸುತ್ತಿದ್ದು, ತಿಂಗಳಿಗೆ ಸುಮಾರು 200 ಡಯಾಲಿಸಿಸ್ ನಡೆಸುತ್ತಿದೆ ಎಂದರು

ಕಾರ್ಕಳ ಡಾ. ಟಿಎಂಎ ಪೈ ಆಸ್ಪತ್ರೆಯ ವಿಸ್ತರಣೆಯು ಕಾರ್ಕಳ ಮತ್ತು ಸುತ್ತಮುತ್ತಲಿನ ಜನರಿಗೆ ಕೈಗೆಟುಕುವ ಮತ್ತು ಸುಲಭವಾಗಿ ಆರೋಗ್ಯ ಸೇವೆಯನ್ನು ಒದಗಿಸುವ ನಮ್ಮ ಬದ್ಧತೆಯ ಮಹತ್ವದ ಮೈಲಿಗಲ್ಲು. ಹೊಸ ಸೌಲಭ್ಯಗಳು, ಉಪಕರಣಗಳು ಮತ್ತು ಸೇವೆಗಳೊಂದಿಗೆ, ನಾವು ನಮ್ಮ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮಾರ್ಕೆಟಿಂಗ್ ಮುಖ್ಯಸ್ಥ ಸಚಿನ್ ಕಾರಂತ್, ಮಣಿಪಾಲದ ಮಾರ್ಕೆಟಿಂಗ್ ಮ್ಯಾನೇಜರ್ ಮೋಹನ್ ಶೆಟ್ಟಿ, ಕಾರ್ಕಳ ಆಸ್ಪತ್ರೆಯ ಮ್ಯಾನೇಜರ್ ನಟೇಶ್ ಕುಮಾರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *