ಕಾರ್ಕಳ : ಕಾರ್ಕಳ ತಾಲೂಕು ಬಿ ಎಸ್ ಕೆ ಕ್ಯಾಶ್ಯೂ ಫ್ಯಾಕ್ಟರಿಯ ಬಳಿ ಹಾದು ಹೋಗಿರುವ ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿರುವ ಮಹಿಳೆಯೊಬ್ಬರಿಗೆ ಲಾರಿ ಡಿಕ್ಕಿಯಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಕಾರ್ಕಳ ಬೆಳ್ಮಣ್ ಸಮೀಪದ ಬಿ ಎಸ್ ಕೆ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಎಂಬವರು ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗಲೆಂದು ರಸ್ತೆ ದಾಟುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಅತಿ ವೇಗವಾಗಿ ಲಾರಿಯನ್ನು ಚಲಾಯಿಸಿ ಅಪಘಾತವೆಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಗೀತಾ ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.