ಉಡುಪಿ : ಉಡುಪಿಯ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು ಎಂದು ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆ ನೀಡಿದ್ದು, ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ವಿವಾದಕ್ಕೆ ತುಮಕೂರು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದು, ವಿವಾದಕ್ಕೆ ತೆರೆ ಎಳೆದಿದ್ದಾರೆ. ಮುಸ್ಲಿಂ ರಾಜ ಶ್ರೀ ಕೃಷ್ಣ ಮಠಕ್ಕೆ ಜಾಗ ನೀಡಿದ್ದು , ಉಡುಪಿಯಲ್ಲಿ ಅಲ್ಲ, ಗಂಗಾ ತೀರದಲ್ಲಿ ಎಂದು ಹೇಳಿದ್ದಾರೆ.ಈ ಬಗ್ಗೆ ಮಾತನಾಡಿದ ಪೇಜಾವರ ಶ್ರೀ ಗಳು ಯಾರೂ ಯಾವ ಹೇಳಿಕೆಯನ್ನಾದರೂ ಕೊಡಬಹುದು. ಆದರೆ ಅಂತಹ ಹೇಳಿಕೆಯನ್ನು ಕೊಡಬೇಕು ಅಂತಾದ್ರೆ ಅದಕ್ಕೆ ಸರಿಯಾದ ಆಧಾರ ನೀಡಬೇಕು. ಮಧ್ವಾಚಾರ್ಯರ ಕಾಲದಲ್ಲಿ ಆ ಘಟನೆ ನಡೆದಿದ್ದು, ಉಡುಪಿಯಲ್ಲಿ ಅಲ್ಲ, ಗಂಗಾ ನದಿ ತೀರದಲ್ಲಿ. ಗುರುಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಪೇಜಾವರ ಹಿರಿಯ ಶ್ರೀಗಳಾಗಿದ್ದ ಶ್ರೀ ವಿಶ್ವೇಷ ತೀರ್ಥ ಶ್ರೀ ಪಾದರು ಹೇಳಿದ ಒಂದು ವಿಚಾರವನ್ನು ತಪ್ಪಾಗಿ ಗ್ರಹಿಸಿ ಅದನ್ನು ಉಡುಪಿಗೆ ಜೋಡಿಸಲಾಗುತ್ತಿದೆ ಎಂದಿದ್ದಾರೆ. ಇದನ್ನು ಮುಂದುವರೆಸಬೇಡಿ ಇಲ್ಲಿಗೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಮೂಡಬಿದರೆ ತಾಲೂಕಿನ ಪುತ್ತಿಗೆಯಲ್ಲಿ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ತುಳುವಿನಲ್ಲಿ ಭಾಷಣ ಮಾಡಿದ ಮಿಥುನ್ ರೈ ಅವರು, ಉಡುಪಿಯ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು, ಮುಸಲ್ಮಾನ ರಾಜರು ಎಂದು ಹೇಳಿದ್ದಾರೆ. ಮಿಥುನ್ ರೈ ಅವರ ಹೇಳಿಕೆಗೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ಮಿಥುನ್ ರೈ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದಾರೆ. ಅವರು ಹೇಗೆ ಶ್ರೀಕೃಷ್ಣ ಮಠಕ್ಕೆ ಜಾಗ ಕೊಡುತ್ತಾರೆ ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಕಿಡಿಕಾರಿದ್ದಾರೆ.