ಕಾರ್ಕಳ:ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಪ್ರವಾಸೋದ್ಯಮ ವಿಚಾರದಲ್ಲಿ ಕಾರ್ಕಳ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲಾಗಿದೆ. ಸ್ವರ್ಣ ಕಾರ್ಕಳ ಕನಸಿಗೆ ಹರಿಯಪ್ಪನ ಕೆರೆ ಸೇರ್ಪಡೆಯಾಗುವ ಮೂಲಕ ಕಾರ್ಕಳ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಅವರು ಬುಧವಾರ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಹರಿಯಪ್ಪನ ಕೆರೆಯನ್ನು ಅಭಿವೃದ್ಧಿಪಡಿಸಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಉದ್ಘಾಟಿಸಿ ಮಾತನಾಡಿದರು.ಈಗಾಗಲೇ 75 ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ.ಹರಿಯಪ್ಪನ ಕೆರೆಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸಲಾಗಿದೆ. ಸುಸಜ್ಜಿತ ಬೋಟಿಂಗ್ ವ್ಯವಸ್ಥೆ,ರಾಕ್ ಗಾರ್ಡನ್,ನಕ್ಷತ್ರವನ,ಔಷದೀಯ ವನ,ವಾಕಿಂಗ್ ಟ್ರ್ಯಾಕ್,ಸೆಲ್ಫಿ ಪಾಯಿಂಟ್,ರಾಶಿ ಉದ್ಯಾನವನ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಿದ್ದು ಇದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ ಎಂದರು.

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹರಿಯಪ್ಪನ ಕೆರೆ ನಿಲುಗಡೆಯ ಸ್ಥಳವಾಗಲಿದೆ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಕ್ಯಾಂಟೀನ್ ಹಾಗೂ ಕ್ರೀಮ್ ಪಾರ್ಲರ್ ತೆರೆಯಲಾಗುವುದು ಎಂದರು.

ಕಾರ್ಕಳಮಾರಿಯಮ್ಮ ದೇವಸ್ಥಾನಕ್ಕೆ ಬಳಸಿದ ಮರಗಳ ಬದಲಿಗೆ 500 ಗಿಡ ಬೆಳೆಸಿ 5 ವರ್ಷ ನಿರ್ವಹಣೆ ಮಾಡುವ ಮೂಲಕ ಪರಿಸರ ಜಾಗೃತಿಯ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ, ಅರಣ್ಯ ಸಂರಕ್ಷಣಾಧಿಕಾರಿ(ಮಂಗಳೂರು ವೃತ್ತ) ಕರಿಕಲನ್,ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ ನಾಯ್ಕ್,ಕುದುರೆಮುಖ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ,ಮಾಳ ಗ್ರಾ.ಪಂ ಅಧ್ಯಕ್ಷೆ ರಕ್ಷಿತಾ ಶೆಟ್ಟಿ, ಮುಡಾರು ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಸ್ವಾಗತಿಸಿದರು. ಉದಯಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

