Share this news

ಕಾರ್ಕಳ: ಕೋಟೆ ಶ್ರೀ ಮಾರಿಯಮ್ಮ ದೇವಿಯ ನೂತನ ಅಭೂತಪೂರ್ವ ಭವ್ಯ ಗರ್ಭಗುಡಿಯಲ್ಲಿ ಶ್ರೀ ಮಾರಿಯಮ್ಮ ದೇವಿಯ ಪುನಃ ಪ್ರತಿಷ್ಠೆ ಹಾಗೂ ಶ್ರೀ ಉಚ್ಚಂಗಿ ದೇವಿಯ ಪುನಃ ಪ್ರತಿಷ್ಠೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಬೆಳಿಗ್ಗೆ 8ರಿಂದ ವಿಶೇಷ ಶಾಂತಿ, ಪ್ರಾಯಶ್ಚಿತ ಹೋಮಗಳು, ಶ್ರೀ ಲಲಿತ ಸಹಸ್ರನಾಮ ಹೋಮ ಬಳಿಕ ಶ್ರೀ ಮಾರಿಯಮ್ಮ ದೇವಿಯ ಹಾಗೂ ಉಚ್ಚಂಗಿ ದೇವಿಯ ಶಿಖರ ಪ್ರತಿಷ್ಠೆಯು ನೆರವೇರಿತು. 10.45 ರಿಂದ ವೃಷಭ ಲಗ್ನ ಸಮುಹೂರ್ತದಲ್ಲಿ ಮಾರಿಯಮ್ಮ ದೇವಿಯ ಪ್ರತಿಷ್ಠೆ, ಕಲಶಾಭಿಷೇಕ ಪ್ರಸನ್ನ ಪೂಜೆ ಹಾಗೂ ಉಚ್ಚಂಗಿ ದೇವಿಯ ಪ್ರತಿಷ್ಠೆ ಕಲಶಾಭಿಷೇಕ ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಸಂಜೆ 4 ರಿಂದ ಅಕ್ಷರ ಲಕ್ಷ ಜಪ ಅನುಷ್ಠಾನದ ಪುಣ್ಯವನ್ನು ಬಿಂಬಕ್ಕೆ ಸಮರ್ಪಣೆ ನಡೆಯಲಿದೆ.

ಸಾಯಂಕಾಲ 6 ಗಂಟೆಯಿAದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸ್ವಾಮೀಜಿ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.


ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗಡೆ ಉದ್ಘಾಟನೆ ನೆರವೇರಿಸಲಿದ್ದು, ಸಚಿವರಾದ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಶೋಭಾ ಕರಂದ್ಲಾಜೆ, ಬಂದರು ಹಾಗು ಒಳನಾಡು ಸಾರಿಗೆ ಸಚಿವರಾದ ಅಂಗಾರ ಎಸ್, ಮೂಡಬಿದಿರೆ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಮೋಹನ್ ಆಳ್ವ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣರಾವ್ ಉಪಸ್ಥಿತರಿರುವರು.

ರಾತ್ರಿ 8 ರಿಂದ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮೂಡಬಿದ್ರೆಯ ವಿದ್ಯಾರ್ಥಿಗಳಿಂದ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ

Leave a Reply

Your email address will not be published. Required fields are marked *