Share this news

ಹೆಬ್ರಿ : ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ PWD ಗುತ್ತಿಗೆದಾರರೊಬ್ಬರಿಗೆ ಅಕ್ರಮವಾಗಿ ಜಮೀನು ಮಂಜೂರುಗೊಳಿಸಿ ಭಾರೀ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಈ ಕುರಿತು ಅವರು ಮಂಗಳವಾರ ಹೆಬ್ರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಬಡ ನಿವೇಶನರಹಿತರಿಗೆ ಹಂಚಿಕೆ ಮಾಡಬೇಕಿದ್ದ ಸರ್ಕಾರಿ ಜಾಗವನ್ನು ಅಕ್ರಮ ಸಕ್ರಮ ನಿಯಮವನ್ನು ಉಲ್ಲಂಘಿಸಿ ಈ ಜಾಗವನ್ನು ಗುತ್ತಿಗೆದಾರ ಅನಂತಕೃಷ್ಣ ಶೆಟ್ಟಿ ಎಂಬವರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

ನಿವೇಶನ ಕೋರಿ ಸುಮಾರು 2 ಸಾವಿರ ಅರ್ಜಿಗಳು ಬಂದಿದ್ದರೂ ಅವುಗಳನ್ನು ತಿರಸ್ಕರಿಸಿ ಪ್ರಥಮ ದರ್ಜೆ ಗುತ್ತಿಗೆದಾರನಾದ ಅನಂತಕೃಷ್ಣ ಶೆಟ್ಟಿಗೆ ಅಕ್ರಮವಾಗಿ ಸರ್ವೆ ನಂ 341-1 ರಲ್ಲಿ 4.71 ಎಕ್ರೆ ಜಾಗವನ್ನು ಮಂಜೂರು ಮಾಡಲಾಗಿದೆ.ಇದರಲ್ಲಿ ಭ್ರಷ್ಟಾಚಾರ ನಡೆದಿದೆ, ಇದು ಜನಸಾಮಾನ್ಯರಿಗೆ ಮಾಡಿದ ದ್ರೋಹವಾಗಿದೆ ಎಂದರು.

ಅಕ್ರಮ ಸಕ್ರಮ ಅರ್ಜಿ ಸಲ್ಲಿಸುವಾಗ ತಾನು ಪ್ರಥಮ‌ ದರ್ಜೆ ಗುತ್ತಿಗೆದಾರನಾಗಿದ್ದರೂ ನಾನೊಬ್ಬ ಕೃಷಿಕ ಎಂದು ಸುಳ್ಳು ಹೇಳಿ ಬಡವರಿಗೆ ಹಂಚಿಕೆಯಾಗಬೇಕಿದ್ದ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆ ಇವರ ವಿರುದ್ಧ ಕ್ರಿಮಿನಲ್ ಮೊಕ್ಕದಮೆ ದಾಖಲಿಸಿ,ಮಂಜೂರಾತಿ ಆದೇಶ ರದ್ದುಗೊಳಿಸಿ ಭೂಮಿಯನ್ನು ಹಿಂಪಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ. ಈ ಮಂಜೂರಾತಿಯನ್ನು ರದ್ದುಗೊಳಿಸಲು ಅಂದಿನ ತಹಶಿಲ್ದಾರರು ಎ.ಸಿ ಅವರಿಗೆ ಪತ್ರ ಬರೆದು ವರದಿ‌ ನೀಡಿದ್ದರೂ ಸಹಾ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮಸೇನಾ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ,ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ನಾಯಕರಾದ ಹರೀಶ್ ಅಧಿಕಾರಿ,ಸುಧೀರ್ ಹೆಬ್ರಿ ,ರಾಘವ ಮುದ್ರಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *