Share this news

ಹೆಬ್ರಿ : ಕಾರ್ಕಳ ವಿಧಾನಸಭಾ ಕ್ಷೇತ್ರದ ಚಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೆಟ್ಟು ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಗ್ರಾಮದ ಸುಮಾರು 25 ಕುಟುಂಬದ 150 ಸದಸ್ಯರು ಚುನಾವಣಾ ಬಹಿಷ್ಕಾರ ಹಾಕುವುದಾಗಿ ಬ್ಯಾನರ್ ಅಳವಡಿಸಿದ್ದಾರೆ .

ಚಾರಾ ಗ್ರಾಮದ ತೆಂಕಬೆಟ್ಟು ಎಂಬಲ್ಲಿ ಸುಮಾರು 25 ಮನೆಗಳಿದ್ದು 150ಕ್ಕೂ ಹೆಚ್ಚು ಮತದಾರರಿದ್ದಾರೆ. ಇಲ್ಲಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಹಾಗೂ ನೀರನ್ನು ಕೊಡದೆ ವಂಚಿತರಾಗಿಸಿದ್ದಾರೆ ಆ ಕಾರಣದಿಂದ ನಾವು ಚುನಾವಣಾ ಬಹಿಷ್ಕಾರ ಹಾಕುವುದಾಗಿ ನಿರ್ಧರಿಸಿದ್ದೇವೆ. ನಮ್ಮ ರಸ್ತೆ ನಮ್ಮ ಹಕ್ಕು ಇದು ಪ್ರತಿಭಟನೆ ಅಲ್ಲ ಹೋರಾಟ. ರಾಜಕಾರಣಿಗಳೇ ನಮ್ಮ ಮನೆಗೆ ಮತ ಕೇಳಲು ಬರಬೇಡಿ. ಹಾಗೆಯೇ ನಿಮ್ಮ ಕಾರ್ಯಕರ್ತರನ್ನು ಸಹ ಕಳುಹಿಸಬೇಡಿ. ಈ ಊರಿನ ನಾಗರಿಕರು ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸುತ್ತೇವೆ ಎಂದು ಚಾರ ತೆಂಕಬೆಟ್ಟು ಗ್ರಾಮಸ್ಥರು ಬ್ಯಾನರ್ ಅಳವಡಿಸಿದ್ದಾರೆ .

ಈ ವಿಚಾರ ತಿಳಿದ ಹೆಬ್ರಿ ತಾಪಂ ಇಒ ಶಶಿಧರ್ ಕೆ.ಜೆ ಅವರು ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ್ದಾರೆ. ಶಶಿಧರ್ ಅವರು ಬೋರ್ವೆಲ್ ಅಳವಡಿಸಿದ್ದ ಜಾಗ ಹಾಗೂ ರಸ್ತೆ ಸಂಪರ್ಕದ ಕುರಿತು ಪರಿಶೀಲನೆ ನಡೆಸಿದರು. ನೀರಿನ ಸಂಪರ್ಕ ಹಾಗೂ ರಸ್ತೆ ವ್ಯವಸ್ಥೆ ಆಗುವತನಕ ಇಲ್ಲಿಯ ಮತದಾರರು ಮತದಾನ ಮಾಡುವುದಿಲ್ಲ ಹಾಗೂ ಬ್ಯಾನರ್ ತೆರವುಗೊಳಿಸುವುದಿಲ್ಲ ದಯಮಾಡಿ ನಮ್ಮನ್ನು ಓಲೈಸಲು ಯಾರು ಬರಬೇಡಿ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿದ ನಂತರವೇ ನಮ್ಮ ಹಕ್ಕು ಚಲಾಯಿಸುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ .

ಈ ಕುರಿತು ಪ್ರತಿಕ್ರಯಿಸಿದ ಇಒ ಶಶಿಧರ್ ಕೆ. ಜೆ ಗ್ರಾಮಸ್ಥರು ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇನ್ನು ರಸ್ತೆ ನಿರ್ಮಾಣಕ್ಕೆ ಅರಣ್ಯ ನಿಯಮಗಳು ತೊಡಕಾಗಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದರು.

ಗ್ರಾಮಸ್ಥರಾದ ರಿತೇಶ್ ಶೆಟ್ಟಿ, ಮಧುಕರ ನಾಯ್ಕ್, ಸುಂದರ ಶೆಟ್ಟಿ,ಮಹಾಬಲ ನಾಯ್ಕ್, ಹೇಮಾ ಶೆಟ್ಟಿ, ಯಶೋಧ ಪೂಜಾರಿ, ಅಮಿತಾ ಪೂಜಾರಿ, ಚೈತ್ರ ಶೆಟ್ಟಿ, ಸೀತಾರಾಮ್ ಶೆಟ್ಟಿ, ವನಜ ಶೆಟ್ಟಿ, ನಾಗರಾಜ ಶೆಟ್ಟಿ, ರಮೇಶ್ ಪೂಜಾರಿ, ಪಾರ್ವತಿ ಶೆಟ್ಟಿ ,ಜ್ಯೋತಿ ಪೂಜಾರಿ, ಲತಾ ಕೃಷ್ಣ ಶೆಟ್ಟಿ, ಮೊದಲಾದವರಿದ್ದರು.

Leave a Reply

Your email address will not be published. Required fields are marked *