ಶಿವಮೊಗ್ಗ : ಚುನಾವಣಾ ಸಂದರ್ಭದಲ್ಲಿ ಜನರ ಭಾವನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಬಗ್ಗೆ ನಾನು ಹೇಳಿದ್ದೇನೆ ಹೊರತು ಗುಳಿಗ ದೈವದ ಬಗ್ಗೆ ನಾನು ಎಲ್ಲಿಯೂ ಟೀಕೆ ಮಾಡಿಲ್ಲ ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಟೀಕೆ ಮಾಡುವವರು ಯಾರು? ನನಗೆ ಗುಳಿಗ, ಪಂಜುರ್ಲಿ ಬಗ್ಗೆ ಭಕ್ತಿ ಇದೆ. ನಿನ್ನೆ ಕೂಡ ಪಂಜುರ್ಲಿ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೇನೆ. ಯಾರಿಗೆ ಇದರ ಬಗ್ಗೆ ನಂಬಿಕೆ ಇಲ್ಲ, ವಿಶ್ವಾಸ ಇಲ್ಲ ಮೂಢನಂಬಿಕೆ ಅಂತಾ ತಿರುಗುತ್ತಿದ್ದರೋ ಅವರೇ ನಿನ್ನೆ ನಾಟಕ ಆಡಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಕೆಲವರು ರಾಜಕೀಯ ಕುತಂತ್ರ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ನನ್ನ ವಿರುದ್ಧ ಇಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಸತ್ಯ ಏನೆಂದು ಜನರಿಗೆ ಗೊತ್ತಿದೆ ಎಂದು ಖಾರವಾಗಿ ಹೇಳಿದರು.

