ವಿಶೇಷ ವರದಿ:
ಕಾರ್ಕಳ: ಅಭಿವೃದ್ಧಿ ಎನ್ನುವುದು ಕೇವಲ ಮಾತಲ್ಲ ಅದೊಂದು ಸಂಕಲ್ಪ ಎನ್ನುವ ಧ್ಯೇಯವಾಕ್ಯದಂತೆ ತಾನು ಅಂದುಕೊAಡಿದ್ದನ್ನು ಸಾಧಿಸುವ ಮೂಲಕ ಅಭಿವೃದ್ಧಿ ವಿಚಾರದಲ್ಲಿ ಕಾರ್ಕಳ ಕ್ಷೇತ್ರದ ದಿಕ್ಕನ್ನೇ ಬದಲಿಸಿದ ಕೀರ್ತಿ ಸಚಿವ ಸುನಿಲ್ ಕುಮಾರ್ ಅವರಿಗೆ ಸಲ್ಲುತ್ತದೆ.

ಕಳೆದ ಹತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಶಾಸಕ ಸುನಿಲ್ ಕುಮಾರ್ ಅವರ ಯೋಜನೆ,ಯೋಚನೆಗಳೇ ವಿಭಿನ್ನ. ಪರಿಸರ ಉತ್ಸವ, ಉದ್ಯೋಗ ಮೇಳ,ಗಾಂಧೀಜಿಗೆ ನೂರೈವತ್ತು ಸ್ವಚ್ಚತೆಗೆ ಸ್ವಲ್ಪಹೊತ್ತು, ಮನೆಯೇ ಮೊದಲ ಪಾಠಶಾಲೆ,ವಾತ್ಸಲ್ಯ ಮಕ್ಕಳ ಆರೋಗ್ಯ ಶಿಬಿರ ಎನ್ನುವ ವಿಭಿನ್ನ ಪರಿಕಲ್ಪನೆಯ ಅರ್ಥಪೂರ್ಣ ಕಾರ್ಯಕ್ರಮಗಳು ಜನಜಾಗೃತಿಯ ಜತೆಗೆ ಸಾಮಾಜಿಕ ಕಾಳಜಿಯನ್ನು ಬಿಂಬಿಸುತ್ತದೆ.
ತನ್ನ ಬಹುಪಾಲು ಶಾಸಕತ್ವದ ಅವಧಿಯಲ್ಲಿ ವಿಪಕ್ಷ ಶಾಸಕನಾಗಿದ್ದರೂ ಕಾರ್ಕಳದ ಅಭಿವೃದ್ಧಿಗಾಗಿ ಅನುದಾನದ ಹೊಣೆಯನ್ನೇ ಹರಿಸುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದರು.
ಬೇಸಗೆಯಲ್ಲಿ ಕಾಡುತ್ತಿದ್ದ ತೀವ್ರ ಜಲಕ್ಷಾಮವನ್ನು ಮನಗಂಡು ಕ್ಷೇತ್ರದಾದ್ಯಂತ ಸುಮಾರು 250ಕ್ಕೂ ಅಧಿಕ ಕಿಂಡಿಅಣೆಕಟ್ಟುಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.

ಕೇವಲ ಅಭಿವೃದ್ಧಿ ಕಾರ್ಯಗಳಷ್ಟೇ ಮಾಡಿದರೆ ಸಾಲದು ಕ್ಷೇತ್ರದ ಜನರ ಮನಸ್ಸಿನಲ್ಲಿ ಯಾವ ಕಾಲಕ್ಕೂ ನೆನಪಿನಲ್ಲಿ ಉಳಿಯಬೇಕೆನ್ನುವ ನಿಟ್ಟಿನಲ್ಲಿ ಶಾಶ್ವತ ಯೋಜನೆಗಳಾದ 108 ಕೋಟಿ ವೆಚ್ಚದ ಎಣ್ಣೆಹೊಳೆ ಏತನೀರಾವರಿ ಯೋಜನೆ,13 ಕೋಟಿ ರೂ ವೆಚ್ಚದ ಕಾರ್ಕಳ ನಗರ ಒಳಚರಂಡಿ ಯೋಜನೆ,ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ 8 ಕೋಟಿ ವೆಚ್ಚದ ಕಾರ್ಕಳ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಿಸುವ ಮೂಲಕ ಅಭಿವೃದ್ಧಿಗೆ ಹೊಸಭಾಷ್ಯ ಬರೆದಿದ್ದಾರೆ.
ಅಭಿವೃದ್ಧಿಯ ಜತೆಜತೆಗೆ ಕಾರ್ಕಳದತ್ತ ಪ್ರವಾಸಿಗರನ್ನು ಸೆಳೆದು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೋಟಿ ಚೆನ್ನಯ್ಯ ಥೀಂ ಪಾರ್ಕ್,ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್,ಹೆಬ್ರಿ ಹಾಗೂ ನಲ್ಲೂರಿನ ಹರಿಯಪ್ಪನಕೆರೆಯಲ್ಲಿ ಬೋಟಿಂಗ್, ಸಾಲು ಮರದ ತಿಮಕ್ಕ ಟ್ರೀ ಪಾರ್ಕ್ ನಿರ್ಮಾಣ,ಮಠದಕೆರೆ ಅಭಿವೃದ್ಧಿಯ ಮೂಲಕ ಕಾರ್ಕಳವನ್ನು ಟೂರಿಸಂ ಹಬ್ ಮಾಡುವ ಸುನಿಲ್ ಕುಮಾರ್ ಕಾರ್ಯಯೋಜನೆಗೆ ಕ್ಷೇತ್ರದ ಜನರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಬಳಿಕ ಸುನಿಲ್ ಕುಮಾರ್ ಅವರು ಇಂಧನ ಇಲಾಖೆಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳು ರಾಜ್ಯದಲ್ಲೇ ಗಮನ ಸೆಳೆದಿದೆ. ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟುವಲ್ಲಿ ಪವರ್ ಗ್ರಿಡ್ ಗಳನ್ನು ಮೇಲ್ದರ್ಜೆಗೆ ಏರಿಸಿ ಹೆಚ್ಚುವರಿ ಸಬ್ ಸ್ಟೇಷನ್ ಗಳನ್ನು ನಿರ್ಮಿಸಿ ಪ್ರಮುಖವಾಗಿ ರೈತರಿಗೆ, ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ (ಲೋ ವೋಲ್ಟೇಜ್ ರಹಿತ)ಪೂರೈಕೆ, ಅನಿಯಮಿತ ವಿದ್ಯುತ್ ಪೂರೈಕೆಗೆ ಟಿಸಿ ಬ್ಯಾಂಕ್ ಸ್ಥಾಪನೆ,ಬಿಪಿಎಲ್ ಕಾರ್ಡುದಾರರಿಗೆ ಬೆಳಕು ಯೋಜನೆಯಡಿ ವಿದ್ಯುತ್ ಕಾಣದ ಮನೆಗಳನ್ನು ಬೆಳಗಿಸಿದ್ದಲ್ಲದೇ, ಪರಿಶಿಷ್ಟ ಜಾತಿ/ಪಂಗಡದ ಬಡ ಕುಟುಂಬಗಳಿಗೆ ಅಮೃತ ಜ್ಯೋತಿ ಕಾರ್ಯಕ್ರಮದಡಿ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಮೂಲಕ ಸುನಿಲ್ ಕುಮಾರ್ ಇಂಧನ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಬಳಿಕ ಈ ಇಲಾಖೆ ಇದೆ ಎನ್ನುವುದು ಜನರ ಅರಿವಿಗೆ ಬಂದಿದ್ದೇ ಅವರ ವಿನೂತನ ಕಾರ್ಯಕ್ರಮಗಳಿಂದ ಎನ್ನುವುದು ಅಷ್ಟೇ ಸತ್ಯ. ಲಕ್ಷ ಕಂಠ ಗಾಯನ,ಕೋಟಿ ಕಂಠ ಗಾಯನ ಎನ್ನುವ ಅಧ್ಬುತ ಪರಿಕಲ್ಪನೆ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ. ಇವರ ಅಧ್ಬುತ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿರುವುದು ಸುನಿಲ್ ಕುಮಾರ್ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ. ಇದರ ಜತೆಗೆ ರಂಗಾಯಣ,ಯಕ್ಷಗಾನ ಅಕಾಡೆಮಿ,ಜಾನಪದ ಅಕಾಡೆಮಿ ಸ್ಥಾಪಿಸುವ ಮೂಲಕ ತೆರೆಮರೆಯಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಜನತೆಗೆ ಪರಿಚಯಿಸಿದ್ದಾರೆ.
ಶಾಸಕನಾಗಿ ಕೆಲಸ ನಿರ್ವಹಿಸಿದ ಜತೆಗೆ ಕೊಟ್ಟ ಖಾತೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಕೇವಲ 2 ವರ್ಷಗಳ ಅವಧಿಯಲ್ಲಿ ಗಣನೀಯ ಸಾಧನೆಯ ಮೂಲಕ ತನ್ನ ಶಾಸಕತ್ವದ 5 ವರ್ಷಗಳ ಸಾಧನೆಗಳ ಪಟ್ಟಿಯನ್ನು ಕ್ಷೇತ್ರದ ಮತದಾರರ ಮುಂದಿಡಲು ಸಜ್ಜಾಗಿದ್ದಾರೆ.
ಅಭಿವೃದ್ಧಿ ಸಾಧನೆಗಳ ರಿಪೋರ್ಟ್ ಕಾರ್ಡ್ ಎನ್ನುವ ಕಿರುಹೊತ್ತಿಗೆ ಬಿಡುಗಡೆ ಕಾರ್ಯಕ್ರಮ ಇಂದು(ಮಾರ್ಚ್ 19) ನಡೆಯಲಿದೆ.

