ಕಾರ್ಕಳ: ಒಬ್ಬ ಶಾಸಕನಾಗಿ ಕಳೆದ 5 ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದೇನೆ ಎನ್ನುವುದು ಜನತೆ ಮುಂದಿಡುವುದು ನನ್ನ ಕರ್ತವ್ಯ, ಅಭಿವೃದ್ಧಿ ಕಾಮಗಾರಿಗಳ ಸ್ಥೂಲ ಪರಿಚಯವನ್ನು ರಿಪೋರ್ಟ್ ಕಾರ್ಡ್ ಮೂಲಕ ಕ್ಷೇತ್ರದ ಮತದಾರರ ಮುಂದಿಟ್ಟಿದ್ದೇನೆ,ಜನರು ನನ್ನ ಶಾಸಕತ್ವದ ಅವಧಿಯ ಸಾಧನೆಗೆ ಆಶೀರ್ವದಿಸಬೇಕೆಂದು ಸಚಿವ ಸುನಿಲ್ ಕುಮಾರ್ ಮನವಿ ಮಾಡಿದರು.

ಅವರು ಭಾನುವಾರ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ಬಳಿಯ ಮೈದಾನದಲ್ಲಿ 5 ವರ್ಷಗಳ ಶಾಸಕತ್ವದ ಅವಧಿಯ ರಿಪೋರ್ಟ್ ಕಾರ್ಡ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಳೆದ ಚುನಾವಣೆಯ ಸಂದರ್ಭದಲ್ಲಿ ಸ್ವರ್ಣ ಕಾರ್ಕಳ ಎನ್ನುವ ಭರವಸೆ ನೀಡಿದ್ದೆ, ಸ್ವರ್ಣ ಕಾರ್ಕಳ ಎಂದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ. ಕ್ಷೇತ್ರದ ಅಭಿವೃದ್ಧಿಗೆ ದೂರದೃಷ್ಟಿ ಚಿಂತನೆಯ ಮೂಲಕ ಸಾಕಷ್ಟು ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ.ಕಳೆದ 5 ವರ್ಷಗಳಲ್ಲಿ ಮೂಲಸೌಕರ್ಯದ ಜತೆಗೆ ಮುಂದಿನ 10 ವರ್ಷಗಳ ಅವಧಿಯ ಯೋಜನೆಗಳನ್ನು ಮುಂದಿಟ್ಟುಕೊಂಡು ಪರಶುರಾಮ ಥೀಮ್ ಪಾರ್ಕ್,ಯಕ್ಷ ರಂಗಾಯಣ, ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ,ಎಣ್ಣೆಹೊಳೆ ಏತನೀರಾವರಿ ಯೋಜನೆ, ಐಟಿಐ ಕಾಲೇಜು ಸ್ಥಾಪನೆ,ಡೀಮ್ಡ್ ಅರಣ್ಯ ಸಮಸ್ಯೆ ನಿವಾರಿಸಿ ನಿವೇಶನರಹಿತರಿಗೆ 2 ಸಾವಿರಕ್ಕೂ ಅಧಿಕ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದರು

ಸ್ವರ್ಣ ಕಾರ್ಕಳದ ಹಾದಿಯಲ್ಲಿ ನಾವು ಸಾಗಬೇಕಾದ ದಾರಿ ಸಾಕಷ್ಟಿದೆ, ಕಾರ್ಕಳವನ್ನು ಮಾದರಿ ಕ್ಷೇತ್ರವಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದು,ಮುಂದಿನ ದಿನಗಳಲ್ಲಿ ಕಾರ್ಕಳ ಯುವಕರಿಗೆ ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಜವಳಿ ಪಾರ್ಕ್, 3 ಸಾವಿರ ಕೋಟಿ ವೆಚ್ಚದ ಆಪ್ಟಿಕಲ್ ಫೈಬರ್ ಕೇಬಲ್ ಉತ್ಪಾದನಾ ಘಟಕ ಸ್ಥಾಪನೆ, ರಾಮಸಮುದ್ರ ಹಾಗೂ ಆನೆಕೆರೆ ಅಭಿವೃದ್ಧಿ,ಕಾರ್ಕಳಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ವರಾಹಿ ಯೋಜನೆಯಡಿ ತಾಲೂಕಿನ 46 ಸಾವಿರ ಕಟುಂಬಗಳಿಗೆ ಮನೆಮನೆಗೆ ಪೈಪ್ ಲೈನ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ತರ ಯೋಜನೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
5 ವರ್ಷಗಳಲ್ಲಿ ಸ್ವರ್ಣ ಕಾರ್ಕಳದ ಕನಸು ನನಸು ಮಾಡಲು ನಾನು ಪಟ್ಟ ಪರಿಶ್ರಮ ಕ್ಷೇತ್ರದ ಜನರು ಹತ್ತಿರದಿಂದ ನೋಡಿದ್ದಾರೆ,ಸ್ವರ್ಣ ಕಾರ್ಕಳದ ಗುರಿ ತಲುಪಲು ಮುಂದಿನ ಚುನಾವಣೆಯಲ್ಲಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.

ಮುಖ್ಯ ಅತಿಥಿಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಮಾತನಾಡಿ,ರಾಜ್ಯದ224 ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರದಲ್ಲಿ ಕಾರ್ಕಳದಲ್ಲಿ ಆದಷ್ಟು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.ಹತ್ತು ಹಲವು ಶಾಶ್ವತ ಯೋಜನೆಗಳು,ಲಕ್ಷ ಕಂಠ ಗಾಯನ, ಕೋಟಿ ಕಂಠ ಗಾಯನದ ಮೂಲಕ ಸಚಿವ ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೊಸರೂಪ ನೀಡಿ ಪ್ರಧಾನ ಮಂತ್ರಿಯವರಿಂದ ಪ್ರಶಂಸೆಗೆ ಪಾತ್ರರಾಗಿದ್ದರು ಎಂದರು.ಸುನಿಲ್ ಕುಮಾರ್ ಅವರ ಸ್ವದೇಶಿ ಚಿಂತನೆ ಹಾಗೂ ಸ್ಥಳೀಯ ಉತ್ಪನ್ನಗಳನ್ನು ಬ್ರಾಂಡ್ ಮಾಡುವ ನಿಟ್ಟಿನಲ್ಲಿ ಬಿಳಿ ಬೆಂಡೆ ಹಾಗೂ ಕಾರ್ಲ ಕಜೆ ಬ್ರಾಂಡಿಂಗ್ ಪರಿಕಲ್ಪನೆ ಶ್ಲಾಘನೀಯ ಎಂದು ಮೋಹನ್ ಆಳ್ವ ಹೇಳಿದರು.
ಸುನಿಲ್ ಕುಮಾರ್ ಏಳಿಗೆ ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ ಆದರೆ ಅಂತಹ ಅಪಪ್ರಚಾರಗಳನ್ನು ನಂಬದೇ ಅಭಿವೃದ್ಧಿಯನ್ನು ಗಮನಿಸಿ ,ಜಾಗೃತಿ ಮೂಡಿಸಿ ಅವರನ್ನು ದಾಖಲೆಯ ಅಂತರದ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕೆಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್, ಎಂ.ಕೆ ವಿಜಯಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಧಾರ್ಮಿಕ ಮುಖಂಡರಾದ ಪುಂಡಲೀಕ ನಾಯಕ್, ರಾಮಚಂದ್ರ ಆಚಾರ್ಯ,ಭಾಸ್ಕರ ಜೋಯಿಸ್,ಪ್ರಗತಿಪರ ಕೃಷಿಕ ಮಹಾಬಲ ಸುವರ್ಣ,ಯುವ ಕುಲಾಲ ಸಂಘದ ಅಧ್ಯಕ್ಷ ಉದಯ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಾಯಕಿ ಸನ್ನಿಧಿ ಚಂದ್ರಶೇಖರ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ರವೀಂದ್ರ ಮೊಯ್ಲಿ ಸ್ವಾಗತಿಸಿ, ಶ್ರೀಧರ್ ಗೌಡ ವಂದಿಸಿದರು.

