ಬೆಂಗಳೂರು : ಕರ್ನಾಟಕದಲ್ಲಿ ಹಠಾತ್ ದಡಾರ ಕಾಯಿಲೆ ಏರಿಕೆಗೊಂಡಿದ್ದು, ರಾಜ್ಯದಲ್ಲಿ 2021ರಲ್ಲಿ 10 ಲಕ್ಷ ಜನರಲ್ಲಿ ಶೇ 4.8 ರಷ್ಟು ಜನರಲ್ಲಿ ದಡಾರ ರೋಗ ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಂಕಿ ಅಂಶಗಳಲ್ಲಿ ವರದಿಯಾಗಿದೆ.
ರಾಜ್ಯದ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕು ಕೇಂದ್ರದಲ್ಲಿ ನೂರಾರು ಮಕ್ಕಳಲ್ಲಿ ದಡಾರ ಕಾಯಿಲೆ ಕಾಣಿಸಿಕೊಂಡಿದ್ದು, ಗ್ರಾಮೀಣ ಜನರಲ್ಲಿ ಆತಂಕ ಸೃಷ್ಟಿಸಿದೆ. 2022ರಲ್ಲಿ 10 ಲಕ್ಷ ಜನರಲ್ಲಿ ಶೇ 8.52ರಷ್ಟು ಜನರಿಗೆ ದಡಾರ ರೋಗ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ರೋಗ ನಿಯಂತ್ರಣಕ್ಕೆ ಮತ್ತು 2023ರ ಅಂತ್ಯದ ವೇಳಗೆ ದಡಾರ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಆರೋಗ್ಯ ಇಲಾಖೆ ಭಾರೀ ಕ್ರಮ ಕೈಗೊಳ್ಳುತ್ತಿದೆ.
ದಡಾರ ಚಿಕ್ಕ ಮಕ್ಕಳಿಗೆ ತುಂಬಾ ಅಪಾಯಕಾರಿ ಸೋಂಕು ಆಗಿದೆ. ಸೋಂಕು ತಗುಲಿದ ನಂತರ 7 ರಿಂದ 14 ದಿನಗಳಲ್ಲಿ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ 104 ಡಿಗ್ರಿ ವರೆಗೆ ಅಧಿಕ ಜ್ವರ, ಕೆಮ್ಮು, ಸೋರುವ ಮೂಗು, ಕೆಂಪು ಕಣ್ಣು, ಅಥವಾ ನೀರು ತುಂಬಿದ ಕಣ್ಣುಗಳು.
ದಡಾರ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ನಂತರ ಸೋಂಕಿತ ಮಗುವಿನಲ್ಲಿ 2 ರಿಂದ 3 ದಿನಗಳ ನಂತರ, ಬಾಯಿಯೊಳಗೆ ಸಣ್ಣ ಬಿಳಿ ಚುಕ್ಕೆಗಳು ಬೆಳೆಯುತ್ತವೆ . ಕೆಂಪು-ಫ್ಲಾಟ್ ರಾಶ್ 3 ರಿಂದ 5 ದಿನಗಳಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಮಗುವಿನ ಮುಖ, ಕುತ್ತಿಗೆ, ತೋಳು, ಕಾಲುಗಳು ಮತ್ತು ಅಡಿಭಾಗದ ಮೇಲೆ ದಡಾರ ರಾಶಸ್ ಉಂಟಾಗುತ್ತದೆ.
ದಡಾರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ
ದಡಾರ ಕಾಯಿಲೆ ತಡೆಗಟ್ಟುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕುವುದು. ದಡಾರದಿಂದ ಮಕ್ಕಳನ್ನು ರಕ್ಷಿಸಲು, ಅವರಿಗೆ 2 ಬಾರಿ ದಡಾರ ಲಸಿಕೆ ನೀಡಲಾಗುತ್ತದೆ. ಏಕೆಂದರೆ ದಡಾರಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಹಾಗಾಗಿ ದಡಾರ ಸಂಭವಿಸಿದ ನಂತರ ಅದರ ರೋಗಲಕ್ಷಣಗಳನ್ನು ನಿಯಂತ್ರಿಸಲು ಮಾತ್ರ ಸಾಧ್ಯ.
ದಡಾರ ಬಂದರೆ ಏನು ಮಾಡಬೇಕು?
ಮಗುವಿಗೆ ದಡಾರ ರೋಗ ನಿರ್ಣಯವಾದ ನಂತರ ವಿಶ್ರಾಂತಿ ನೀಡುವುದು, ಮಗುವನ್ನು ಇತರೆ ಮಕ್ಕಳಿಂದ ಪ್ರತ್ಯೇಕಿಸುವುದು, ಆಗಾಗ ನೀರು ಮತ್ತು ಜ್ಯೂಸ್ ಕುಡಿಸುವುದು, ಒದ್ದೆ ಹತ್ತಿಯಿಂದ ಮಗುವಿ ದೇಹ ಸ್ವಚ್ಛಗೊಳಿಸುವುದು, ವೈದ್ಯರ ಸಲಹೆ ಮೇರೆಗೆ ಜ್ವರದ ಔಷಧ ನೀಡುವುದು, ಶುಚಿತ್ವ ಕಾಪಾಡುವುದು. ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯುವುದು. ದಡಾರ ಕಾಯಿಲೆ ಇದೊಂದು ವೇಗವಾಗಿ ಹರಡುವ ಸೋಂಕು. ಇದು ಪ್ಯಾರಾಮಿಕ್ಸೊವೈರಸ್ ಕುಟುಂಬದ ವೈರಸ್ ನಿಂದ ಉಂಟಾಗುತ್ತದೆ. ಈ ವೈರಸ್ ಮೊದಲು ಉಸಿರಾಟದ ಪ್ರದೇಶಕ್ಕೆ ಧಕ್ಕೆ ಮಾಡುತ್ತದೆ. ನಂತರ ಕೆಮ್ಮು ಅಥವಾ ಶೀತ ಅಥವಾ ನೇರ ಸ್ಪರ್ಶದಿಂದ ಆರೋಗ್ಯವಂತ ಜನರಿಗೆ ಸೋಂಕು ತಗುಲುತ್ತದೆ.