Share this news

ಕಾರ್ಕಳ: ಕಳೆದ ಹಲವು ದಶಕಗಳಿಂದ ಪರಿಹಾರ ಕಾಣದೇ ಜಟಿಲವಾಗಿದ್ದ ಡೀಮ್ಡ್ ಅರಣ್ಯ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಬೇಕೆನ್ನುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ ಪರಿಣಾಮ ಡೀಮ್ಡ್ ಅರಣ್ಯ ಪ್ರದೇಶವನ್ನು ವಿರಹಿತಗೊಳಿಸಿ ಕಂದಾಯಭೂಮಿಯನ್ನಾಗಿಸಿ ಅರ್ಜಿ ಸಲ್ಲಿಸಿದ ಎಲ್ಲಾ ನಿವೇಶನರಹಿತರಿಗೆ ಹಕ್ಕುಪತ್ರ ಸಿಕ್ಕಿದೆ.ಮುಂದಿನ ದಿನಗಳಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಎಲ್ಲಾ ನಿವೇಶನರಹಿತರಿಗೂ ಹಕ್ಕುಪತ್ರ ನೀಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.


ಅವರು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಮಂಗಳವಾರ ನಿವೇಶನರಹಿತರಿಗೆ ಹಕ್ಕುಪತ್ರ ಹಾಗೂ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಬಡವರು ಸ್ವಂತ ನಿವೇಶನದಲ್ಲಿ ಮನೆಕಟ್ಟಿ ನೆಮ್ಮದಿಯ ಬದುಕು ಸಾಗಿಸುವಂತಾಗಬೇಕೆಂಬ ಆಶಯದಿಂದ ನಿವೇಶನ ವಿತರಿಸಬೇಕೆನ್ನುವುದು ದಶಕದ ಕನಸಾಗಿತ್ತು,ಕಳೆದ 5 ವರ್ಷಗಳಿಂದ ನಮ್ಮ ತಾಲೂಕಿನ ಡೀಮ್ಡ್ ಸಮಸ್ಯೆ ವಿಚಾರವಾಗಿ ಶಾಸಕನಾಗಿ ಸಚಿವನಾಗಿ ಸರ್ಕಾರದ ಮಟ್ಟದಲ್ಲಿ ನಾನು ನಡೆಸಿದ ಪ್ರಯತ್ನ ಹಾಗೂ ಬಿಜೆಪಿಯ ಎಲ್ಲಾ ಸ್ತರದ ಜನಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಸಂಘಟಿತ ಪ್ರಯತ್ನದ ಫಲವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಸುಮಾರು 2 ಸಾವಿರಕ್ಕೂ ಮಿಕ್ಕಿ ನಿವೇಶನರಹಿತರಿಗೆ ಹಕ್ಕುಪತ್ರ ವಿತರಿಸಲು ಸಾಧ್ಯವಾಯಿತು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.


ತಾಲೂಕಿನ 170 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ಹಾಗೂ ಕಾರ್ಮಿಕ ಇಲಾಖೆಯಿಂದ ಫಲಾನುಭವಿಗಳಿಗೆ 100 ಎಲೆಕ್ಟ್ರಿಕ್ ಕಿಟ್ ಹಾಗೂ 200 ಪೌಷ್ಟಿಕ ಆಹಾರದ ಕಿಟ್ ಗಳನ್ನು ಸಚಿವ ಸುನಿಲ್ ಕುಮಾರ್ ವಿತರಿಸಿದರು‌.

ಈ ಸಂದರ್ಭದಲ್ಲಿ ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಮುಖ್ಯಾಧಿಕಾರಿ ರೂಪಾ ಶೆಟ್ಟಿ,ಶಿರ್ಲಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮಾನಂದ ಪೂಜಾರಿ,ಕುಕ್ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಮಣಿ ಉಪಸ್ಥಿತರಿದ್ದರು.
ಕಾರ್ಕಳ ತಹಶಿಲ್ದಾರ್ ಅನಂತಶಂಕರ ಸ್ವಾಗತಿಸಿದರು.ರಿಯಾಜ್ ಫಲಾನುಭವಿಗಳ ಪಟ್ಟಿ ವಾಚಿಸಿದರು.

 

Leave a Reply

Your email address will not be published. Required fields are marked *