ಕಾರ್ಕಳ: ಹಾಸನ ಜಿಲ್ಲೆಯ ಶ್ರವಣಬೆಳಗೊಳ ಜೈನಪೀಠದ ಜಗದ್ಗುರುಗಳಾದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ನಿಧನಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹಠಾತ್ ಜಿನೈಕ್ಯರಾಗಿರುವುದು ಆಘಾತ ಮೂಡಿಸಿದೆ. ಶ್ರೀಗಳುಜೈನ ಧರ್ಮದ ಮೂಲತತ್ವಗಳಾದ ಶಾಂತಿ, ಅಹಿಂಸೆ, ಸಹನೆ ತತ್ವಗಳನ್ನು ಪಾಲಿಸಿಕೊಂಡು ಜಗತ್ತಿಗೆ ಶಾಂತಿ ಸಂದೇಶ ಸಾರುವ ಮೂಲಕ ಸದೃಢ ಸಮಾಜ ರೂಪಿಸುವಲ್ಲಿ ಅವರ ಕೊಡುಗೆ ಅಪಾರವಾಗಿತ್ತು.
ಮೂಲತಃ ಕಾರ್ಕಳದ ವರಂಗ ಗ್ರಾಮದವರಾದ ಶ್ರೀಗಳು ಸರಳತೆಯ ಸಾಕಾರಾಮೂರ್ತಿಯಾಗಿ ಧಾರ್ಮಿಕ ಉಪನ್ಯಾಸಗಳ ಮೂಲಕ ಲಕ್ಷಾಂತರ ಜನರ ಬದುಕಿನಲ್ಲಿ ಅರಿವಿನ ಬೆಳಕು ಮೂಡಿಸಿದ್ದರು. ಶ್ರೀಗಳ ಅಗಲಿಕೆಯಿಂದ ಆಗಿರುವ ನೋವನ್ನು ಸಹಿಸುವ ಶಕ್ತಿಯನ್ನು ಸಮಸ್ತ ಕರ್ನಾಟಕ ಹಾಗೂ ಜೈನ ಮತಾನುಯಾಯಿಗಳಿಗೆ ದೇವರು ಕರುಣಿಸಲಿ ಎಂದು ಇಂಧನ , ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.