ಹೆಬ್ರಿ : ಹೆಬ್ರಿ ಕಾರ್ಕಳ ತಾಲೂಕಿನಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಿ ಹಕ್ಕು ಪತ್ರ ನೀಡುತ್ತಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿ ಹಕ್ಕುಪತ್ರ ನೀಡುತ್ತಿದ್ದಾರೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ನೀಡುವುದಾದರೆ ಅರ್ಜಿ ಹಾಕಿದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಹಕ್ಕುಪತ್ರ ನೀಡಬೇಕು. ಇದು ಚುನಾವಣೆಯ ಹೊತ್ತಿನಲ್ಲಿ ನೀಡುವ ಬೋಗಸ್ ಹಕ್ಕುಪತ್ರ, ಈ ಹಕ್ಕುಪತ್ರಕ್ಕೆ ಯಾವುದೇ ಬೆಲೆ ಇಲ್ಲ. ಈ ಬಗ್ಗೆ ತಹಶೀಲ್ದಾರ್ ಜನತೆಗೆ ಸ್ಪಷ್ಟನೆ ನೀಡಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಆಗ್ರಹಿಸಿದ್ದಾರೆ.

ಅವರು ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹೆಬ್ರಿ ತಾಲೂಕಿನಲ್ಲಿಯೇ ಸುಮಾರು 2 ಸಾವಿರ ಅರ್ಜಿಗಳು ಬಾಕಿ ಇವೆ. ಈ ಹಿಂದೆ ನೀಡಿದ ಯಾವುದೇ ಹಕ್ಕುಪತ್ರಕ್ಕೂ ತಹಶೀಲ್ದಾರ್ ಎನ್.ಒ. ಸಿ ದೊರೆಯುತ್ತಿಲ್ಲ. ಬ್ಯಾಂಕ್ಗಳಲ್ಲಿ ಸಾಲವೂ ಸಿಗುತ್ತಿಲ್ಲ. ಜನತೆಗೆ ಸರಿಯಾದ ಹಕ್ಕುಪತ್ರ ನೀಡಿದ್ದರೆ ತಹಶೀಲ್ದಾರ್ ಎನ್.ಒ.ಸಿ ನೀಡಲಿ ಎಂದು ಮಂಜುನಾಥ ಪೂಜಾರಿ ಸವಾಲು ಹಾಕಿದರು.

ಜನರಿಗೆ ತಾತ್ಕಾಲಿಕ ಹಕ್ಕುಪತ್ರ ನೀಡಿದ್ದಾರೆ. ಇದು ಸರಿಯಲ್ಲ. ಹಕ್ಕುಪತ್ರ ನೀಡುವುದಾದರೆ ಎಲ್ಲರಿಗೂ ಖಾಯಂ ಹಕ್ಕುಪತ್ರ ನೀಡಲಿ. ತಾಲೂಕು ಕಚೇರಿಯಲ್ಲಿ ಉತ್ತಮವಾಗಿ ಜನರ ಕಷ್ಟಗಳಿಗೆ ಸ್ಪಂದಿಸಲಿ. ಸುಪ್ರೀಂ ಕೋರ್ಟ್ ನಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥ ಆಗಿದ್ದರೆ ಜನತೆಗೆ ಬಹಿರಂಗ ಪಡಿಸಲಿ. ಅಕ್ರಮಸಕ್ರಮ 2016ರಲ್ಲಿ ಬಾಕಿ ಇತ್ತು. ಈಗ ಎಷ್ಟು ಕೊಟ್ಟಿದ್ದಾರೆ, ಎಷ್ಟು ಬಾಕಿ ಇದೆ ಗೊತ್ತಿಲ್ಲ. ಸಮಸ್ಯೆ ಕೋರ್ಟಿನಲ್ಲಿ ಇರುವಾಗ ಸರ್ಕಾರ ತಪ್ಪು ಮಾಹಿತಿ ನೀಡಿ ಹಕ್ಕುಪತ್ರ ನೀಡುವುದು ಸರಿಯಲ್ಲ. ಸಮಸ್ಯೆ ಬಗೆಹರಿದಿದ್ದರೆ ಎಲ್ಲರಿಗೂ ಹಕ್ಕುಪತ್ರ ನೀಡಿ ಎಂದು ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯರಾದ ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಆಗ್ರಹಿಸಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ ಕಬ್ಬಿನಾಲೆ, ಹೆಬ್ರಿ ಬ್ಲಾಕ್ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಜನಾರ್ಧನ್, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಸುರೇಶ್, ಶಂಕರ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.

