Share this news

ಕಾರ್ಕಳ: ಪುರಸಭಾ ವ್ಯಾಪ್ತಿಯ ಅನಂತಶಯನ ದೇವಸ್ಥಾನದ ಬಳಿಯ ಪುರಾತತ್ವ ಇಲಾಖೆಯ ನಿಷೇಧಿತ ವಲಯದಲ್ಲಿ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಕಳ ಮಾರುತಿ ಗ್ಯಾಸ್ ಏಜೆನ್ಸಿ ಮಾಲಕರಾದ ಶೈಲಾ ಪೈ ಹಾಗೂ ನಿತ್ಯಾನಂದ ಪೈ ಎಂಬವರು ಅನಧಿಕೃತವಾಗಿ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣ ಮಾಡುತ್ತಿರುವ ವಿಚಾರದಲ್ಲಿ ಕಟ್ಟಡ ಮಾಲಕರಾದ ನಿತ್ಯಾನಂದ ಪೈ ಹಾಗೂ ಶೈಲಾ ಪೈ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳ ಕಸಬಾ ಗ್ರಾಮದ ಅನಂತಶಯನ ಅನಂತಪದ್ಮನಾಭ ದೇವಸ್ಥಾನದ ಬಳಿಯ ನಿಷೇಧಿತ ಪ್ರದೇಶವಾದ ಸ.ನಂ 86/24 ರಲ್ಲಿ 0.1 ಎಕ್ರೆ ಹಾಗೂ ಸ.ನಂ 86/6A1 ರಲ್ಲಿ 0.86 ಎಕ್ರೆ ಜಾಗದಲ್ಲಿ ನಿತ್ಯಾನಂದ ಪೈ ಎಂಬವರು ಸಂಗೀತ ಶಾಲಾ ಕಟ್ಟಡದ ದುರಸ್ತಿಗೆಂದು ಬೆಂಗಳೂರು ಪುರಾತತ್ವ ಇಲಾಖೆಯ ಅನುಮತಿ ಪಡೆದುಕೊಂಡಿದ್ದರು. ಪುರಾತತ್ವ ಇಲಾಖೆಯ ನಿಯಮಾವಳಿ ಪ್ರಕಾರ ಕೇವಲ ಹಳೆಯ ಕಟ್ಟಡಗಳ ದುರಸ್ತಿಗೆ ಮಾತ್ರ ಷರುತ್ತಬದ್ದ ಅನುಮತಿ ನೀಡಲಾಗಿತ್ತು, ಆದರೆ ನಿತ್ಯಾನಂದ ಪೈ ಹಾಗೂ ಶೈಲಾ ಪೈ ಎಂಬವರು ದುರಸ್ತಿಗೆ ನೀಡಲಾಗಿದ್ದ ಅನುಮತಿಯನ್ನು ದುರುಪಯೋಗಪಡಿಸಿ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ಕಾಮಗಾರಿ ಆರಂಭಿಸಿದ್ದರು.

ಪುರಾತತ್ವ ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಸ್ಥಳೀಯ ಪುರಸಭೆಯ ಅನುಮತಿಯನ್ನು ಪಡೆಯದೇ ಏಕಾಎಕಿ ಅನಧಿಕೃತ ಕಟ್ಟಡ ಕಾಮಗಾರಿ ಆರಂಭಿಸಿದ್ದರು.ಈ ಕಾಮಗಾರಿಯನ್ನು ಸ್ಥಗಿತಗೊಳಿಸಿ ಮಾಲಕರ ವಿರುದ್ಧ ಕ್ರಮಜರುಗಿಸಬೇಕೆಂದು ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭಾ ಸದಸ್ಯ ಸೋಮನಾಥ ನಾಯ್ಕ್ ಒತ್ತಾಯಿಸಿದ್ದರು ಹಾಗೂ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದ ಹಿನ್ನಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ಪುರಾತತ್ವ ಇಲಾಖೆ ಗಂಭೀರವಾಗಿ ಪರಿಗಣಿಸಿ ನಿಷೇಧಿತ ವಲಯದಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ ಮಾಲಕರಿಗೆ ಹಲವು ಬಾರಿ ನೋಟೀಸ್ ನೀಡಿದ್ದರಿಂದ ಸ್ವಲ್ಪ ಸಮಯ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಿದ್ದರು.

 

ಇದೀಗ ಮತ್ತೆ ಮಾರ್ಚ್ 22ರಂದು ನಿತ್ಯಾನಂದ ಪೈಯವರು ಮತ್ತೆ ಅನಧಿಕೃತ ಕಟ್ಟಡ ಕಾಮಗಾರಿ ಆರಂಭಿಸಿದ್ದರು. ಈ ಕಾಮಗಾರಿ ಸ್ಥಗಿತಗೊಳಿಸಲು ಕಾರ್ಕಳ ಪುರಾತತ್ವ ಇಲಾಖೆಯ ಕಿರಿಯ ಸಂರಕ್ಷಣಾಧಿಕಾರಿ ಗೋಕುಲ್ ಪ್ರವೀಣ್ ಸೂಚಿಸಿದರೂ ಕಾಮಗಾರಿ ಮುಂದುವರಿಸಿರುವ ಹಿನ್ನಲೆಯಲ್ಲಿ ಮಾಲಕರಾದ ನಿತ್ಯಾನಂದ ಪೈ ಹಾಗೂ ಶೈಲಾ ಪೈ ಎಂಬವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *