ಉಡುಪಿ: ಅಂಡರ್ವರ್ಲ್ಡ್ ಗ್ಯಾಂಗ್ನಿಂದ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆಗಾರರ ವಿರುದ್ಧ ಕ್ರಮಕ್ಕೆ ಕುಟುಂಬದವರು ದೈವದ ಮೊರೆ ಹೋದ ಘಟನೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಾಂಗಾಳ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ( ಮಾರ್ಚ್ 23) ನಡೆದ ವರ್ತೆ ಪಂಜುರ್ಲಿ ದೈವದ ಕೋಲದಲ್ಲಿ ಶರತ್ ಶೆಟ್ಟಿ ಕುಟುಂಬಸ್ಥರು ಕೊಲೆಗೆ ನ್ಯಾಯ ಕೇಳಿದ್ದು ಈ ವೇಳೆ ಶರತ್ ಶೆಟ್ಟಿ ಯಾವ ರೀತಿ ಸಾಯುವಂತಾಯಿತು ಅದೇ ರೀತಿ ಅವರನ್ನು ಸರ್ವನಾಶ ಮಾಡುವುದಾಗಿ ದೈವ ಭರವಸೆ ನೀಡಿದೆ.
ಕಾಪು ತಾಲೂಕಿನ ಪಾಂಗಾಳ ಶರತ್ ವಿ. ಶೆಟ್ಟಿ ಕೊಲೆಯಾಗಿ ತಿಂಗಳುಗಳೇ ಕಳೆದಿವೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಮಂದಿಯ ಬಂಧನವೂ ಆಗಿದೆ. ಶರತ್ ವಿ. ಶೆಟ್ಟಿ (42) ಪಾಂಗಾಳ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಿದ್ದರು.
ಇವರು ಪಾಂಗಾಳ ಪಡುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮದಲ್ಲಿ ಪಾಲ್ಗೊಂಡಿದ್ದಾಗ ಮಾತುಕತೆಗೆಂದು ಕರೆದ ದುಷ್ಕರ್ಮಿಗಳು, ಬಳಿಕ ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.