ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳಲಾಗಿದ್ದು, ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಮುಸ್ಲಿಮರಿಗೆ 2ಬಿ ಅಡಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಆದರೆ ಅವರಿಗೆ ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ಎರಡು ಬೃಹತ್ ಸಮುದಾಯಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಸರ್ಕಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ವಿಧಾನಸೌಧದಲ್ಲಿ ಶುಕ್ರವಾರ ಸಂಜೆ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸ್ವಾತಂತ್ರ‍್ಯ ಬಂದ ನಂತರ ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಕಾಲಕಾಲಕ್ಕೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹಲವು ಸಮಿತಿಗಳನ್ನು ರಚಿಸಲಾಗಿದೆ, ಆದರೆ, ನಂತರ ಅವುಗಳ ಶಿಫಾರಸನ್ನು ಜಾರಿಮಾಡಿರಲಿಲ್ಲ. ಹಲವಾರು ವರದಿಗಳ ಜಾರಿಗೆ ಸರ್ಕಾರಗಳು ಮುಂದಾಗಿರಲಿಲ್ಲ. ಜೇನುಗೂಡಿಗೆ ಕೈಹಾಕಿದಂತೆ ಎಂದು ಸರ್ಕಾರಗಳು ಸುಮ್ಮನಾಗುತ್ತಿದ್ದವು. ಆದರೆ ನಾವು ಎಸ್‌ಸಿ ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ಬ್ರಿಟಿಷರ ಕಾಲ, ಮಹಾರಾಜರ ಕಾಲದ ದಾಖಲೆ ಪರಿಶೀಲಿಸಿದ್ದೇವೆ. ಬಂಜಾರ, ಬೋವಿ ಸಮುದಾಯವನ್ನು ಎಸ್‌ಸಿಯಿಂದ ಹೊರಗಿಡಲಾಗಲ್ಲ. ಎಲ್ಲಾ ದಾಖಲೆ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಎಸ್‌ಟಿ ಸಮುದಾಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗುತ್ತದೆ. ಆರ್ಟಿಕಲ್ 342 ಅನ್ವಯ 4 ಗುಂಪುಗಳಲ್ಲಿ ವರ್ಗೀಕರಣ ಮಾಡಿದ್ದರು. ಈ ಪೈಕಿ ಗುಂಪು ಒಂದು ಆದಿಜಾಂಬವ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ, ಗುಂಪು 2 ಆದಿಕರ್ನಾಟಕ ಸಮುದಾಯಕ್ಕೆ ಶೇ 5.5ರಷ್ಟು ಮೀಸಲಾತಿ, ಗುಂಪು 3 ಬಂಜಾರ, ಬೋವಿ, ಕೊರಚರಿಗೆ ಶೇ 4.5ರಷ್ಟು ಮೀಸಲಾತಿ, ಗುಂಪು 4ರಲ್ಲಿರುವ ಮತ್ತಿತರರಿಗೆ ಶೇ.1ರಷ್ಟು ಮೀಸಲಾತಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಕಾಡುಕುರುಬ, ಜೇನುಕುರುಬರನ್ನು ಎಸ್‌ಟಿಗೆ ಸೇರಿಸಬೇಕೆಂಬ ವಿಚಾರವಾಗಿ ಮೈಸೂರು ವಿವಿ ಸಮಿತಿ ನಿನ್ನೆಯಷ್ಟೇ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.
ಹಿಂದುಳಿದ ವರ್ಗದಲ್ಲಿ ಒಂದೇ ಕೆಟಗರಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ 7 ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಇಲ್ಲ. 2ಬಿ ಅಡಿ ಮೀಸಲಾತಿ ನೀಡಿಲ್ಲ. 2ಅ ಅಡಿ ಒಕ್ಕಲಿಗರಿಗೆ ಶೇಕಡಾ 6ರಷ್ಟು ಮೀಸಲಾತಿ ಹಾಗೂ 2ಆ ಅಡಿ ಲಿಂಗಾಯತರಿಗೆ ಶೇಕಡಾ 7ರಷ್ಟು ಮೀಸಲಾತಿ ನೀಡಲಾಗುವುದು. ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈಗ ಅದು ಅನುಷ್ಠಾನ ಹಂತದಲ್ಲಿ ಇದೆ. ನೇಮಕಾತಿ, ಬಡ್ತಿ ಇದೇ ಆಧಾರದಲ್ಲಿ ಆಗುತ್ತಿದೆ. 9 ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಿದ್ದೇವೆ. ಒಳಮೀಸಲಾತಿ ಬಗ್ಗೆ ಕ್ಯಾಬಿನೆಟ್ ಉಪ ಸಮಿತಿ ಸಹ ರಚನೆ ಮಾಡಲಾಗಿತ್ತು. ಎಸ್‌ಸಿ ಮೀಸಲಾತಿಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆರ್ಟಿಕಲ್ 341 (2) ಅನ್ವಯ ನಾಲ್ಕು ಗುಂಪುಗಳಾಗಿ ವರ್ಗೀಕರಣ ಮಾಡಲಾಗಿದೆ. ಎಸ್‌ಸಿ ಲೆಫ್ಟ್ 6, ಎಸ್‌ಸಿ ರೈಟ್ 5.5, ಸ್ಪರ್ಶ 4.5 ಹಾಗೂ ಇತರರಿಗೆ 1 ಮೀಸಲಾತಿ ಶಿಫಾರಸ್ಸು ಮಾಡಲು ಸಂಪುಟ ಸಮ್ಮತಿಸಿದೆ ಎಂದು ಅವರು ಮಾಹಿತಿ ನೀಡಿದರು.
ಲಿಂಗಾಯತ ಪಂಚಮಸಾಲಿಗೆ 2ಸಿ, 2ಡಿ ಮೀಸಲಾತಿ ನೀಡುವ ವಿಷಯಕ್ಕೆ ಸಂಬAಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಯಥಾಸ್ಥಿತಿ ಮಧ್ಯಂತರ ಆದೇಶವನ್ನು ಗುರುವಾರ ತೆರವುಗೊಳಿಸಲಾಗಿತ್ತು. ಇದರಿಂದ ಚುನಾವಣೆ ಹೊಸ್ತಿಲಿನಲ್ಲಿ ಸರ್ಕಾರ ನಿರಾಳವಾಗಿತ್ತು. 2ಎ ಮೀಸಲಾತಿಯಲ್ಲಿ ಯಾವುದೇ ಪರಿವರ್ತನೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ಹೈಕೋರ್ಟ್ಗೆ ತಿಳಿಸಿದ್ದರು. ಈ ಭರವಸೆ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿತ್ತು.
2ಸಿ, 2ಡಿ ಹೊಸ ಪ್ರವರ್ಗ ಸೃಷ್ಟಿಗೆ ಮುಂದಾಗಿರುವ ರಾಜ್ಯ ಸರ್ಕಾರ ಅದಕ್ಕಾಗಿ ಮುಸ್ಲಿಂ ಸಮುದಾಯಕ್ಕೆ 2ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಶೇ 4ರ ಮೀಸಲಾತಿ ರದ್ದು ಮಾಡಿದೆ. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ ಅಡಿ ಪರಿಗಣಿಸಲು ನಿರ್ಧರಿಸಿದೆ. ಬಳಿಕ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ತಲಾ ಶೇ 2ರ ಮೀಸಲಾತಿ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದೆ.