ಮುಂಬೈ : 2022ರಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಆರೋಪದಡಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೇಸು ವಜಾಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಕಾರ್ಯಕ್ರಮವೊಂದರಲ್ಲಿ ಮಮತಾ ಕುಳಿತೇ ರಾಷ್ಟ್ರಗೀತೆ ಹಾಡಿದ್ದರು, ಬಳಿಕ ಎದ್ದು ನಿಂತರಾದರೂ, ಒಂದೆರಡು ಸಾಲು ಹೇಳಿ ಅರ್ಧದಲ್ಲೇ ಅದನ್ನೂ ನಿಲ್ಲಿಸಿ ಕಾರ್ಯಕ್ರಮದಿಂದ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಅವರ ಕ್ರಮ ಕೋರಿ ದೂರು ದಾಖಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಮ್ಯಾಜಿಸ್ಪ್ರೇಟ್ ಕೋರ್ಟ್ ಮಮತಾ ಬ್ಯಾನರ್ಜಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಮಮತಾ ಬ್ಯಾನರ್ಜಿ ಸೆಶನ್ಸ್ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈ ವೇಳೆ ಸೆಶನ್ಸ್ ಕೋರ್ಟ್, ಸಮನ್ಸ್ ಜಾರಿಯಲ್ಲಿ ಲೋಪವಾಗಿದೆ ಎಂದು ಹೇಳಿ, ಹೊಸದಾಗಿ ವಿಚಾರಣೆ ನಡೆಸುವಂತೆ ಮ್ಯಾಜಿಸ್ಪ್ರೇಟ್ ಕೋರ್ಟ್ಗೆ ಸೂಚಿಸಿತ್ತು. ಹೀಗಾಗಿ ತಮ್ಮ ಮೇಲಿನ ಪ್ರಕರಣವನ್ನೇ ವಜಾಗೊಳಿಸುವಂತೆ ಕೋರಿ ಮಮತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೇಸು ವಜಾಕ್ಕೆ ಹೈಕೋರ್ಟ್ ನಿರಾಕರಿಸಿದೆ.