ಅಹಮದಾಬಾದ್: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 16ನೇ ಆವೃತ್ತಿಗೆ ಇಂದು (ಶುಕ್ರವಾರ) ಚಾಲನೆ ದೊರೆಯಲಿದ್ದು, ಟೂರ್ನಿಯ ಅದ್ದೂರಿ ಆರಂಭಕ್ಕೆ ವೇದಿಕೆ ಸಜ್ಜಾಗಿದೆ. 50ಕ್ಕೂ ಹೆಚ್ಚು ದಿನಗಳ ಕಾಲ 10 ತಂಡಗಳ ನಡುವೆ ಟ್ರೋಫಿಗಾಗಿ ಕಾದಾಟ ನಡೆಯಲಿದ್ದು, ಅಭಿಮಾನಿಗಳಿಗೆ 300ಕ್ಕೂ ಹೆಚ್ಚು ಗಂಟೆಗಳ ಕಾಲ ಭರಪೂರ ಮನರಂಜನೆ ಸಿಗಲಿದೆ.
ಈ ಸಲವೂ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್, 4 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಾಗಿ ಕಣಕ್ಕಿಳಿಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ಗೆ ಚೊಚ್ಚಲ ಟ್ರೋಫಿ ಗೆಲ್ಲುವ ಛಲದೊಂದಿಗೆ ಮೈದಾನಕ್ಕಿಳಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ತಂಡಗಳೂ ಮೊದಲ ಬಾರಿಗೆ ಚಾಂಪಿಯನ್ ಆಗಲು ಕಾಯುತ್ತಿವೆ.
16ನೇ ಆವೃತ್ತಿಯು ಹಲವು ಹೊಸತುಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ. ‘ಇಂಪ್ಯಾಕ್ಟ್’ ಆಟಗಾರ ನಿಯಮ, ಟಾಸ್ ಬಳಿಕ ಆಡುವ ಹನ್ನೊಂದರ ಬಳಗದ ನಿರ್ಧಾರ, ವೈಡ್, ನೋಬಾಲ್‌ಗೂ ಡಿಆರ್‌ಎಸ್ ಬಳಕೆ ಆಯ್ಕೆ ಹೀಗೆ ಕೆಲ ಹೊಸ ನಿಯಮಗಳು ರೋಚಕತೆ ಹೆಚ್ಚಿಸಲಿವೆ. ಜೊತೆಗೆ ಈ ಬಾರಿ ಟೀವಿ ವರ್ಸಸ್ ಡಿಜಿಟಲ್ ‘ಯುದ್ಧಕ್ಕೂ’ ಐಪಿಎಲ್ ಸಾಕ್ಷಿಯಾಗಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಾಲಿವುಡ್ ತಾರೆಯರಾದ ತಮನ್ಹಾ ಭಾಟಿಯಾ, ರಶ್ಮಿಕಾ ಮಂದಣ್ಣ, ಖ್ಯಾತ ಗಾಯಕ ಅರಿಜಿತ್ ಸಿಂಗ್ ಪ್ರದರ್ಶನ ನೀಡಲಿದ್ದಾರೆ. ಇನ್ನೂ ಕೆಲ ಮನರಂಜನಾ ಕಾರ‍್ಯಕ್ರಮಗಳನ್ನು ಬಿಸಿಸಿಐ ಆಯೋಜಿಸಿದೆ. ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದ್ದು, ಒಂದು ಗಂಟೆ ಕಾಲ ನಡೆಯಲಿದೆ.