ಬೆಂಗಳೂರು : ದೊಡ್ಡಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಚೆಕ್ಪೋಸ್ಟ್ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರನ್ನು ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ (ಮಾ. 31) ತಪಾಸಣೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ಬಳಿಯ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸುತ್ತಿದ್ದಾಗ ಘಟನೆ ನಡೆದಿದೆ. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡವು ಸಿಎಂ ಬೊಮ್ಮಾಯಿ ಅವರ ಕಾರನ್ನು ಪರಿಶೀಲಿಸಿದರು. ಯಾವುದೇ ರೀತಿಯ ಆಕ್ಷೇಪಾರ್ಹ ವಸ್ತುಗಳು ಸಿಗದ ಹಿನ್ನೆಲೆ ತಪಸಣೆ ಮಾಡಿ ಕಳುಹಿಸಿದ್ದಾರೆ.
ಭಾರತದ ಚುನಾವಣಾ ಆಯೋಗ ಮಾರ್ಚ್ 29 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಗೆ ದಿನಾಂಕವನ್ನು ಘೋಷಣೆ ಮಾಡಿದೆ. ಆ ಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಹಾಗಾಗಿ ಸಿಎಂ ಬೊಮ್ಮಾಯಿ ಕಾರನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿದ್ದಾರೆ. ರಾಜ್ಯದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.