ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಪ್ರಚಾರದ ಕಾವು ರಂಗು ಪಡೆದುಕೊಂಡಿದೆ. ಮತದಾರರ ಮನಗೆಲ್ಲಲು ಮೂರು ರಾಜಕೀಯ ಪಕ್ಷಗಳಿಂದ ತಂತ್ರ ಪ್ರತಿತಂತ್ರಗಳೇ ನಡೆಯುತ್ತಿವೆ. ಇನ್ನು ಚುನಾವಣೆ ಹೊತ್ತಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ಅಭಿನಯ ಚಕ್ರವರ್ತಿ ಸುದೀಪ್ ಇಂದು(ಏಪ್ರಿಲ್ 05) ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭ್ಯರ್ಥಿಗಳ ಆಯ್ಕೆ ಸಭೆ ಮಧ್ಯೆಯೇ ಬೆಂಗಳೂರಿನ ಎರಡು ಖಾಸಗಿ ಹೋಟೆಲ್‌ಗಳಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ಕರೆದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದೂ ಸಹ ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಇದರ ನಡುವೆಯೇ ಇಂದು (ಏಪ್ರಿಲ್ 05) ಮಧ್ಯಾಹ್ನ 1.30 ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. ಇದಾದ ಒಂದು ಗಂಟೆ ನಂತರ ಅಂದರೆ ಮಧ್ಯಾಹ್ನ 2.30ಕ್ಕೆ ಸಿಎಂ ಬೊಮ್ಮಾಯಿ ಮತ್ತೊಂದು ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೊಮ್ಮಾಯಿ ಅವರ ಮೊದಲ ಸುದ್ದಿಗೋಷ್ಠಿಯಲ್ಲಿ ನಟ ಸುದೀಪ್ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ವೇಳೆ ತಮ್ಮ ರಾಜಕೀಯ ಎಂಟ್ರಿ ಬಗ್ಗೆಯೂ ಸುದೀಪ್ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಎರಡನೇ ಸುದ್ದಿಗೋಷ್ಠಿಯಲ್ಲಿ ಸುದೀಪ್, ಬಿಜೆಪಿಯ ಹಾಡು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಬೊಮ್ಮಾಯಿ ತಮ್ಮ ಸುದ್ದಿಗೋಷ್ಠಿಯ ವಿಷಯವನ್ನು ಬಹಿರಂಗಪಡಿಸದೇ ನಿಗೂಢವಾಗಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರ ಇಂದಿನ ಎರಡು ಸುದ್ದಿಗೋಷ್ಠಿಗಳು ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಡೆದುಕೊಂಡಿದೆ.


