ನವದೆಹಲಿ : ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಒಳಒಪ್ಪಂದ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಾಂಬ್ ಹಾಕಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುತ್ತಾರೆಂದು ಹೇಳಲಾಗಿತ್ತು, ಇದೀಗ ಅವರು ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಇದರ ಅರ್ಥ ಏನು ಎಂದು ದೇವೇಗೌಡ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಜತೆಗಿನ ಮೈತ್ರಿ ಸಾಧ್ಯತೆ ಕುರಿತು ಕೆಲ ವಾಹಿನಿಗಳಿಗೆ ನೀಡಿದ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಹೊಂದಾಣಿಕೆಗೆ ವರಿಷ್ಠರ ಒಪ್ಪಿಗೆ ಇದೆಯೇ, ಇಲ್ವೇ ಎಂಬುದು ಆ ಪಕ್ಷದವರಿಗೇ ಬಿಟ್ಟಿದ್ದು ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜತೆಗೆ ಯಾವುದೇ ಮೈತ್ರಿ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಹೊಂದಾಣಿಕೆ ಇರುವಾಗ ಅದು ಸಾಧ್ಯವೇ ಎಂದು ಪ್ರಶ್ನಿಸಿದರು. ಪುತ್ರ ಕುಮಾರಸ್ವಾಮಿ ಅವರಿಗೂ ಮೈತ್ರಿ ಕುರಿತು ಒಲವಿಲ್ಲ. ಅವರು ಸ್ವತಂತ್ರ ಸರ್ಕಾರ ರಚನೆ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಜೆಡಿಎಸ್ ಅಧಿಕಾರಕ್ಕೆ ಬರಲು ಹೋರಾಟ ನಡೆಸುತ್ತಿವೆ. ಯಾರು ಗೆಲ್ಲುತ್ತಾರೆ, ಸರ್ಕಾರ ರಚಿಸುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ಜೆಡಿಎಸ್ ಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಇದೇ ವೇಳೆ ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.