ನ್ಯೂಯಾರ್ಕ್ : 4 ದಿನದ ಹಿಂದೆಯಷ್ಟೇ ವೆಬ್ ಆವೃತ್ತಿಯ ಮುಖಪುಟದಲ್ಲಿ ಟ್ವಿಟ್ಟರ್‌ನ ಲೋಗೊವನ್ನು ನಾಯಿ ಚಿಹ್ನೆಗೆ ಬದಲಾಯಿಸಿದ್ದ ಎಲನ್ ಮಸ್ಕ್, ಇದೀಗ ಮತ್ತೆ ಹಳೆಯ ನೀಲಿ ಹಕ್ಕಿಯ ಚಿತ್ರವನ್ನೇ ಆ ಜಾಗಕ್ಕೆ ತಂದಿದ್ದಾರೆ. ಟ್ವಿಟ್ಟರ್ ಮೂಲ ಲೋಗೋ ಬದಲಾವಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಮೊಬೈಲ್ ಆವೃತ್ತಿಯಲ್ಲಿ ಲೋಗೋ ಬದಲಾವಣೆ ಆಗಿರಲಿಲ್ಲ.
ಈಗ ನೀಲಿ ಹಕ್ಕಿ ವೆಬ್ ಆವೃತ್ತಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಕ್ಕೆ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಎಲಾನ್ ಮಸ್ಕ್ ತನ್ನ ಮತ್ತು ಅನಾಮಧೇಯ ವ್ಯಕ್ತಿಯ ನಡುವೆ ಸಂಭಾಷಣೆ ನಡೆದಿತ್ತು. ಅದರಲ್ಲಿ ವ್ಯಕ್ತಿಯು ನಾಯಿಯನ್ನ ಟ್ವಿಟ್ಟರ್‌ನ ಲೋಗೋವಾಗಿ ಮಾಡುವಂತೆ ಎಲಾನ್ ಮಸ್ಕ್‌ಗೆ ಸಲಹೆ ನೀಡಿದ್ದರು. ಅವರಿಗೆ ಎಲಾನ್ ಮಸ್ಕ್ ಭರವಸೆ ನೀಡಿದ್ದರು. ಹೀಗಾಗಿ 4 ದಿನದ ಮಟ್ಟಿಗೆ ನಾಯಿ ಚಿತ್ರ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಟ್ವಿಟ್ಟರ್ ಖರೀದಿಸಿದ ಬಳಿಕ ಅದರಲ್ಲಿ ನಾನಾ ಬದಲಾವಣೆಗಳನ್ನು ಮಾಡಿರುವ ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್‌ನ ಚಿಹ್ನೆಯಾದ ಹಾರುವ ಹಕ್ಕಿ ಬದಲಿಗೆ ನಾಯಿಯನ್ನು ಪ್ರತಿಷ್ಠಾಪಿಸಿದ್ದರು. ಮಂಗಳವಾರ ವೆಬ್‌ಸೈಟ್ ಮೂಲಕ ಪ್ರವೇಶಿಸಿದ ಟ್ವಿಟ್ಟರ್ ಬಳಕೆದಾರರಲ್ಲಿ ಈ ಬದಲಾವಣೆ ಗೋಚರಿಸಿತ್ತು. ಆದರೆ ಮೊಬೈಲ್ ಆ್ಯಪ್‌ಗಳಲ್ಲಿ ಹಕ್ಕಿಯ ಚಿಹ್ನೆಯೇ ಮುಂದುವರೆದಿತ್ತು.
ಮೀಮ್ಸ್‌ಗಳಲ್ಲಿ ಹೆಚ್ಚಾಗಿ ಬಳಸುವ ಶಿಬಾ ಇನು ತಳಿಯ ನಾಯಿಯ ಚಿತ್ರವನ್ನು ಇದಕ್ಕೆ ಬಳಸಲಾಗಿದೆ. ಇದರ ಜೊತೆಗೆ ವ್ಯಂಗ್ಯಚಿತ್ರವೊಂದನ್ನು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಈ ಚಿತ್ರದಲ್ಲಿ ನೂತನ ಲೋಗೋದಲ್ಲಿರುವ ನಾಯಿ ಕಾರು ಚಲಾಯಿಸುತ್ತಿದ್ದು ಟ್ರಾಫಿಕ್ ಪೊಲೀಸರಿಗೆ ತನ್ನ ಡ್ರೈವಿಂಗ್ ಲೈಸೆನ್ಸ್ ನೀಡಿದೆ. ಇದರಲ್ಲಿ ಟ್ವಿಟ್ಟರ್‌ನ ಹಳೆಯ ಲೋಗೋ ನೀಲಿ ಹಕ್ಕಿಯ ಚಿತ್ರವಿದೆ. ಇದನ್ನು ಗಮನಿಸುತ್ತಿರುವ ಟ್ರಾಫಿಕ್ ಪೊಲೀಸ್‌ಗೆ ಅದು ನನ್ನ ಹಳೆಯ ಫೋಟೋ ಎಂದು ನಾಯಿ ಹೇಳುತ್ತಿದೆ.
2022ರ ಮಾರ್ಚ್ 26 ರಂದು ವ್ಯಕ್ತಿಯೊಬ್ಬರೊಂದಿಗೆ ನಡೆದ ಸಂಭಾಷಣೆ ಸ್ಕ್ರೀನ್‌ಶಾಟ್ ಅನ್ನು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಟ್ವಿಟ್ಟರ್‌ನ ಲೋಗೋವನ್ನು ನೀಲಿ ಹಕ್ಕಿಯಿಂದ ನಾಯಿಗೆ ಬದಲಾಯಿಸುವಂತೆ ಕೇಳಿದ್ದರು. ಇದರೊಂದಿಗೆ ‘ಭರವಸೆ ನೀಡಿದಂತೆ’ ಎಂದು ಎಲಾನ್ ಮಸ್ಕ್ ಬರೆದುಕೊಂಡಿದ್ದರು.