ಕಾರ್ಕಳ: ಸ್ಕೂಟರ್ ಸವಾರನ ಎಡವಟ್ಟು ಚಾಲನೆಯಿಂದ ಕಾರಿಗೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮೂರೂರು ಎಂಬಲ್ಲಿ ಸಂಭವಿಸಿದೆ.
ಈ ಅಪಘಾತದಲ್ಲಿ ಸ್ಕೂಟರ್ ಸವಾರ ಗೋಕುಲ್ ನಾಯ್ಕ್(70) ಎಂಬವರು ಗಾಯಗೊಂಡಿದ್ದಾರೆ.
ಸ್ಕೂಟರ್ ಸವಾರ ಗೋಕುಲ್ ನಾಯ್ಕ್ ಸ್ಕೂಟರಿನಲ್ಲಿ ಕಾರ್ಕಳ ಕಡೆಯಿಂದ ಮೂರೂರು ಮೀನು ಮಾರುಕಟ್ಟೆ ಬಳಿ ಬಂದು ನಿಲ್ಲಿಸಿ ಎದುರಿನಿಂದ ಕಾರ್ಕಳ ಕಡೆಗೆ ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸದೇ ಏಕಾಎಕಿ ಬಲಬದಿಗೆ ತಿರುಗಿಸಿದಾಗ ಕಾರು ಚಾಲಕ ರಸ್ತೆಯ ನಡುವೆ ಬಂದಿದ್ದ ಸ್ಕೂಟರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಕಾರನ್ನು ಎಡಬದಿಗೆ ತಿರುಗಿಸಿದಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದೇ ವೇಳೆ ಸ್ಕೂಟರ್ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸವಾರ ಗೋಕುಲ್ ನಾಯ್ಕ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ ಸ್ಕೂಟರಿಗೆ ಯಾವುದೇ ಹಾನಿಯಾಗಿಲ್ಲ.
ಕಾರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಮೂಡಬಿದಿರೆ ಆಳ್ವಾಸ್ ಕಾಲೇಜಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದ ರಂಗಾಯಣ ನಿರ್ದೇಶಕರೊಬ್ಬರ ಮಗಳು ಮೂಡಬಿದಿರೆ ಕಾಲೇಜಿಗೆ ತೆರಳುತ್ತಿದ್ದರು. ಅಪಘಾತದಿಂದ ಏರ್ ಬ್ಯಾಗ್ ಓಪನ್ ಆಗಿರುವ ಹಿನ್ನೆಲೆಯಲ್ಲಿ ಚಾಲಕ ಹಾಗೂ ವಿದ್ಯಾರ್ಥಿನಿ ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.